ನನಗೆ ನಾಳೆ ಬಜೆಟ್ ಪರೀಕ್ಷೆ : ಮೋದಿ
ಹೊಸದಿಲ್ಲಿ, ಫೆ.28: ನನಗೆ ನಾಳೆ ಪರೀಕ್ಷೆ ಇದೆ. ಅದು ಕೇಂದ್ರ ಬಜೆಟ್. ದೇಶದ 125ಕೋಟಿ ಜನರು ನನ್ನನ್ನು ಪರೀಕ್ಷಿಸಲಿದ್ದಾರೆ.ಪರೀಕ್ಷೆಯನ್ನು ಎದುರಿಸುವ ವಿಶ್ವಾಸ ನನಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ರವಿವಾರ 17ನೇ ಆವೃತ್ತಿಯ ಮನ್ ಕಿ ಬಾತ್ ನಲ್ಲಿ ಇಂದು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.ಒತ್ತಡವಿಲ್ಲದೆ ಪರೀಕ್ಷೆ ಎದುರಿಸಬೇಕು. ನಿಮ್ಮ ಗುರಿ ನಿಗದಿಪಡಿಸಿ. ನೀವು ಇನ್ನೊಬ್ಬರೊಂದಿಗೆ ಸ್ಪರ್ಧೆಗಿಳಿಯಬೇಡಿ ನಿಮ್ಮನೊಂದಿಗೆ ನೀವು ಸ್ಪರ್ಧಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದರು.
ಶಿಸ್ತು ಯಶಸ್ವಿ ಜೀವನಕ್ಕೆ ಭದ್ರವಾದ ಅಡಿಪಾಯ ಹಾಕಿಕೊಡುತ್ತದೆ. ನಿಮ್ಮ ಮನಸ್ಸು ಪರಿಶುದ್ದವಾಗಿದ್ದರೆ ಜ್ಞಾನದ ಖಜಾನೆಯನ್ನು ಪಡೆಯಲು ಸಾಧ್ಯ. ಪರೀಕ್ಷೆ ಎದುರಿಸಲು ಸುಲಭ ಸಾಧ್ಯವಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ,ಮಾಜಿ ಚೆಸ್ ಚಾಂಪಿಯನ್ ಆಟಗಾರ ವಿಶ್ವನಾಥ್ ಆನಂದ್, ಸಿಎನ್‌ಆರ‍್, ಮುರಾರಿ ಬಾಪು ಮೋದಿಗೆ ಸಾಥ್ ನೀಡಿದರು.