×
Ad

ಸಮಾಜದ ಋಣ ತೀರಿಸುವ ಜವಾಬ್ದಾರಿ ವೈದ್ಯರದ್ದು-ಗಂಗಾಧರ್

Update: 2016-02-28 16:01 IST

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜಿನ ಪದವಿ ಪ್ರಧಾನ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಬೆಂಗಳೂರಿನ ನಿಮಾನ್ಸ್ ನಿರ್ದೇಶಕ ಬಿ.ಎನ್.ಗಂಗಾಧರ್ ಸಮಾರಂಭ ಉದ್ಘಾಟಿಸಿ ಪದವಿ ಪ್ರಧಾನ ಮಾಡಿದರು. ವೈದ್ಯಕೀಯದಲ್ಲಿ ಪದವಿ ಪಡೆಯಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಅಂತಹ ಅವಕಾಶ ಪಡೆದವರು ಹಾಗೂ ಅವರ ಹೆತ್ತವರು ಪುಣ್ಯಶಾಲಿಗಳು. ವ್ಯಾಸಾಂಗ ಸಮಯದಲ್ಲಿ ಪ್ರಾಧ್ಯಾಪಕರೊಂದಿಗೆ ನರ್ಸ್‌ಗಳು, ರೋಗಿಗಳು, ಕ್ಯಾಂಟೀನ್‌ನವರು ನಿಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಸಮಾಜದ ಋಣವೂ ನಿಮ್ಮ ಮೇಲಿದೆ. ಅದನ್ನು ತೀರಿಸುವ ಜವಾಬ್ದಾರಿಯೂ ವೈದ್ಯರ ಮೇಲಿದೆ. ಸರ್ಕಾರದ ಉದಾರೀಕರಣ ನೀತಿಯಿಂದ ರಾಜ್ಯದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು ಆರಂಭವಾದ ಬಳಿಕ ವೈದ್ಯರ ಕೊರತೆ ಕಡಿಮೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ಸಾವಿರ ಮಂದಿಗೆ ಓರ್ವ ವೈದ್ಯ ಇರಬೇಕು ಎಂಬ ನಿಯಮವಿದೆ. ಆದರೆ ದೇಶದಲ್ಲಿ ಪ್ರಸ್ತುತ 2 ಸಾವಿರ ಮಂದಿಗೆ ಓರ್ವ ವೈದ್ಯರಿದ್ದಾರೆ. ಎಂಬಿಬಿಎಸ್ ಪದವಿ ದೀರ್ಘಾವದಿಯದಾಗಿದ್ದು ಆಯುಷ್ ತರಬೇತಿಯನ್ನು ಹೇರಿದರೆ ಅದೂ ಇನ್ನೂ ದೀರ್ಘವಾಗಬಹುದು ಎಂದವರು ಹೇಳಿದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನಿನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಕೆ.ಸಿ.ಅಕ್ಷಯ್, ಶೋಭಾ ಚಿದಾನಂದ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ರಘು, ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ.ಕಾರಿಯಪ್ಪ, ಡೀನ್ ಶೀಲಾ ಜಿ ನಾಯಕ್, ಕೆವಿಜಿ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪಡ್ಡಂಬೈಲು ವೆಂಕಟ್ರಮಣ ಗೌಡ, ಡಾ.ರಾಮಚಂದ್ರ ಭಟ್, ಡಾ.ಸುಬ್ರಹಣ್ಯ, ಡಾ.ಶಂಕರನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ.ಮನೋಜ್ ಹಾಗೂ ಡಾ.ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News