ಅಡ್ಕಾರು ಅಂಜನಾದ್ರಿ ವಾರ್ಷಿಕ ಜಾತ್ರಾ ಮಹೋತ್ಸವ ಉಪೇಂದ್ರ ಕಾಮತ್, ಗೋಪಾಡ್ಕರ್‌ರಿಗೆ ಅಂಜನಾದ್ರಿ ಪುರಸ್ಕಾರ
ಸುಳ್ಯ :ಜಾಲ್ಸೂರು ಗ್ರಾಮದ ಅಡ್ಕಾರು ಮಾಯಿಲಕೋಟೆ ಅಂಜನಾದ್ರಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಹಾಗೂ ಗುಳಿಗ ರಾಜ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಿತು.
ಶ್ರೀ ಕ್ಷೇತ್ರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಶಾಶ್ವತ ಚಪ್ಪರವನ್ನು ಉದ್ಘಾಟಿಸಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯನ ಮನಸ್ಸಿನ ಕಲ್ಮಶಗಳನ್ನು ದೂರ ಮಾಡುತ್ತದೆ. ಪ್ರತಿಯೊಬ್ಬರ ಮನಸ್ಸು ಮಗುವಿನ ಮನಸ್ಸಾಗಬೇಕು. ಧಾರ್ಮಿಕ ನಂಬಿಕೆಗಳ ಮೂಲಕ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್ ಅಂಗಾರ ಮಾತನಾಡಿ ಎಲ್ಲಿ ದೇವರ ಮೇಲೆ ನಂಬಿಕೆ ಇದೆಯೋ ಅಲ್ಲಿ ಭಕ್ತಿ ಇರುತ್ತದೆ. ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಅನುದಾನ ವಿರಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಧಾರ್ಮಿಕ ಸಾಮಾಜಿಕ, ಶಿಕ್ಷಣ ಹಾಗೂ ಕಲಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಗ್ರಾಮದ ಗಣ್ಯಮಾನ್ಯರಿಗೆ ’ಅಂಜನಾದ್ರಿ ಪುರಸ್ಕಾರ-2016’ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಚಿವ ರಮಾನಾಥ ರೈ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷರಾದ ಡಾ ಕೆ.ವಿ.ಚಿದಾನಂದರವರು ಜಂಟಿಯಾಗಿ ಮಂಗಳೂರು ಸ್ವರೂಪ ಶಿಕ್ಷಣ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಹಾಗೂ ಉದ್ಯಮಿ ಉಪೇಂದ್ರ ಕಾಮತ್‌ರವರಿಗೆ ನೀಡಿ ಪುರಸ್ಕರಿಸಿದರು. ಇದೇ ಸಂದರ್ಭದಲ್ಲಿ ಕೆಲವು ತಿಂಗಳುಗಳ ಹಿಂದೆ ಮ್ಯಾನ್ಮಾರ್ ಗಡಿಯಲ್ಲಿ ಉಗ್ರರನ್ನು ಸದೆಬಡಿದ ತಂಡದಲ್ಲಿದ್ದ ಮಂಡೆಕೋಲಿನ ಯೋಧ ರಘುಪತಿ ದಂಪತಿಗಳನ್ನು ಕ್ಷೇತ್ರದ ಆಡಳಿತ ಮಂಡಳಿಯ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಗುಜರಾತ್‌ನಲ್ಲಿ ಉದ್ಯಮಿಯಾಗಿರುವ ಜಾಲ್ಸೂರಿನ ಆರ್.ಕೆ.ನಾಯರ್, ಪಿ.ಡಬ್ಲ್ಯೂ.ಡಿ. ಕಂಟ್ರಾಕ್ಟರ್, ಉದ್ಯಮಿ ಗೋಪಾಲಕೃಷ್ಣ ಕರೋಡಿ, ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್, ಜಾಲ್ಸೂರು ತಾಲೂಕು ಪಂಚಾಯತ್ ನೂತನ ಸದಸ್ಯ ತೀರ್ಥರಾಮ ಜಾಲ್ಸೂರು, ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನಾಯಕ್, ಉಪಾಧ್ಯಕ್ಷ ದಿನೇಶ್ ನಾಯಕ್ ಅಡ್ಕಾರು, ಸದಸ್ಯ ಎ.ಆರ್.ಬಾಬು ಅಡ್ಕಾರು, ಆಡಳಿತ ಮಂಡಳಿ ಗೌರವ ಅಧ್ಯಕ್ಷ ಶಿವರಾಮ ರೈ ಕುರಿಯಗುತ್ತು, ಅಧ್ಯಕ್ಷ ದಯಾನಂದ ರೈ ಡಿಂಬ್ರಿಗುತ್ತು, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಸುಲೋಚನ ನಾಯಕ್, ಅಧ್ಯಕ್ಷೆ ಸನ್ನುತಾ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.