110 ಕೆವಿ ಮಾರ್ಗ ರಚನೆಗೆ ಆಗ್ರಹಿಸಿ ಬಿಜೆಪಿ ಉಪವಾಸ ಸತ್ಯಾಗ್ರಹ
ಸುಳ್ಯ: ಸುಳ್ಯ ತಾಲೂಕಿನಲ್ಲಿ ನಿರಂತರ ವಿದ್ಯುತ್ ಕಡಿತ, ಲೋ ವೋಲ್ಟೇಜ್ ಸಮಸ್ಯೆಯನ್ನು ವಿರೋಧಿಸಿ ಹಾಗೂ 110 ಕೆವಿ ವಿದ್ಯುತ್ ಮಾರ್ಗಕ್ಕೆ ಆಗ್ರಹಿಸಿ ಬಿಜೆಪಿ ಮತ್ತು ಬಿಎಂಎಸ್. ಭಾರತೀಯ ಕಿಸಾನ್ ಸಂಘಗಳ ಜಂಟಿ ಆಶ್ರಯದಲ್ಲಿ ಮಾರ್ಚ್ 2ರಂದು ಮೆಸ್ಕಾಂ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಯಿಂದ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಲೋವೋಲ್ಟೇಜ್ ಸಮಸ್ಯೆಯಿಂದ ರೈತರು ಪಂಪು ಚಾಲನೆ ಮಾಡಲೂ ಅಸಾಧ್ಯವಾಗಿದೆ. ಒಟ್ಟಿನಲ್ಲಿ ಜನರು ರೋಸಿ ಹೋಗಿದ್ದಾರೆ. 110 ಕೆವಿ ಮಾರ್ಗದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದ್ದು, ಈ ಮೂರು ಬೇಡಿಕೆಗಳನ್ನು ಮುಂದಿಟ್ಟು ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದರು. ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಆಗಮಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಬಿಜೆಪಿ ಆಡಳಿತ ಸಮಯದಲ್ಲಿ ಶೋಭಾ ಕರಂದ್ಲಾಜೆ ಇಂಧನ ಸಚಿವೆ ಆಗಿದ್ದಾಗ ಇದೇ ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ಬರುತ್ತಿತ್ತು. ಇಷ್ಟೇ ಸಂಪರ್ಕವಿತ್ತು. ಈಗೇಕೆ ಇಷ್ಟು ಸಮಸ್ಯೆಯಾಗಿದೆ ಎಂದು ಅವರು ಪ್ರಶ್ನಿಸಿದರು. ಈಗ 110 ವಿದ್ಯುತ್ ಮಾರ್ಗ ಮಾಡಿದರೆ ಅದರ ಕ್ರೆಡಿಟ್ ಬಿಜೆಪಿಗೆ ಹೋಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ಸರ್ಕಾರ ಅದನ್ನು ಕಡೆಗಣಿಸಿದೆ. ಉಸ್ತುವಾರಿ ಸಚಿವರು 110 ಮಾರ್ಗವನ್ನು ಮಾಡಿಸಿ ತನ್ನ ಇಚ್ಛಾಶಕ್ತಿಯಲ್ಲಿ ತೋರಿಸಬೇಕು ಎಂದವರು ಹೇಳಿದರು.
ಮಾರ್ಚ್ 5ರಂದು ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥೀಗಳ ವಿಜಯೋತ್ಸವ ಮತದಾರರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ. ಸಂಜೆ 3 ಗಂಟೆಗೆ ಸುಳ್ಯದ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅದಕ್ಕೂ ಮುನ್ನ ಶಾಸ್ತ್ರಿ ವೃತ್ತದಿಂದ ಮೆರವಣಿಗೆ ನಡೆಯಲಿದೆ ಎಂದವರು ಹೇಳಿದರು. ಪಕ್ಷದ ಮುಖಂಡರಾದ ಎಸ್.ಎನ್.ಮನ್ಮಥ, ಜಯಪ್ರಕಾಶ್ ಕುಂಚಡ್ಕ, ವೆಂಕಟ್ ದಂಬೆಕೋಡಿ. ನವೀನ್ ಕುಮಾರ್ ಮೇನಾಲ, ಎನ್.ಎ.ರಾಮಚಂದ್ರ, ಪ್ರಕಾಶ್ ಹೆಗ್ಡೆ, ವಿನಯಕುಮಾರ್ ಕಂದಡ್ಕ, ಸುಬ್ರಹ್ಮಣ್ಯ ಕುಳ, ವೆಂಕಟ್ ವಳಲಂಬೆ, ಎನ್.ಆರ್.ಉಮೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.