ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿ ಆಯೋಜಿಸಲಾಗಿದ್ದ ಪಿಲಿಕುಳ ಸಂಭ್ರಮ- 2016
ಮಂಗಳೂರು,ಫೆ.28: ಪ್ರವಾಸಿಗರನ್ನು ಆಕರ್ಷಿಸಲು ಇಂದು ಪಿಲಿಕುಳ ನಿಸರ್ಗಧಾಮದಲ್ಲಿ ಆಯೋಜಿಸಲಾಗಿದ್ದ ಪಿಲಿಕುಳ ಸಂಭ್ರಮ- 2016ರಲ್ಲಿ ಮೃಗಾಲಯದ ಮುಂಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಮ್ಮ ರೈತ ಸಂಸ್ಕೃತಿಯ ಬೇರುಗಳನ್ನು ಅರಿಯೋಣ ಬನ್ನಿ ಎಂಬ ಸಂದೇಶದೊಂದಿಗೆ ಆಯೋಜಿಸಲಾದ ಸುಗ್ಗಿ ಹುಗ್ಗಿ ಜಾನಪದ ಕಾರ್ಯಕ್ರಮ ಮತ್ತು ಪಿಲಿಕುಳ ಬಯಲಾಜಿಕಲ್ ಪಾರ್ಕ್‌ನಲ್ಲಿ ಸಂಸದ ನಿಧಿಯಿಂದ 33 ಲಕ್ಷ ರೂ.ವೆಚ್ಚದಲ್ಲಿ ಅಳವಡಿಸಲಾದ ಇಂಟರ್‌ಲಾಕನ್ನು ಸಂಸದ ನಳಿನ್ ಕುಮಾರ್ ಇಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಂಸದರ ನಿಧಿಯಿಂದ ನೀಡಲಾದ 33 ಲಕ್ಷ ಅನುದಾನದಲ್ಲಿ ಪಿಲಿಕುಳದಲ್ಲಿ ಉತ್ತಮ ಇಂಟರ್‌ಲಾಕ್ ಅಳವಡಿಕೆ ಆಗಿದೆ. ಮುಂದಿನ ಅವಧಿಯಲ್ಲಿ ಇಲ್ಲಿನ ಕಾಮಗಾರಿಗೆ ನಿಧಿಯಿಂದ ನೀಡಲಾಗುವ ಹಣದಿಂದ ಕಾಮಗಾರಿಯನ್ನು ಸಂಪೂರ್ಣ ಮಾಡಲಾಗುವುದು ಎಂದು ಹೇಳಿದರು.
ರಾಜ್ಯದ ವಿವಿಧ ಭಾಗಗಳಿಂದ ಬಂದ ಜಾನಪದ ತಂಡಗಳು ಕಂಗೀಲು ,ಲಂಬಾಣಿ ನೃತ್ಯ, ಕೊಡವ ನೃತ್ಯ , ಗೀಗಿ ಪದಗಳು, ಡೊಳ್ಳು ಕುಣಿತ, ನಗಾರಿ, ಹುಲಿವೇಷ , ಸುಗ್ಗಿಕುಣಿತ, ಕರಂಗೋಲು, ವೀರಗಾಸೆ, ಪೂಜಾ ಕುಣಿತ, ಕೋಲಾಟ, ಕಂಸಾಲೆ, ಚೆನ್ನು ಕುಣಿತ, ಯಕ್ಷಗಾನ ಪ್ರದರ್ಶನಗಳನ್ನು ನಡೆಸಿದರು.
ಇದೇ ಸಂದರ್ಭದಲ್ಲಿ ಪುರುಷ ಮತ್ತು ಮಹಿಳೆಯರ ಮುಕ್ತ ವಾಲಿ ಬಾಲ್ ಟೂರ್ನಮೆಂಟ್‌ನ್ನು ದೇಹದಾರ್ಡ್ಯಪಟು, ಮಿ. ವರ್ಲ್ಡ್ ಹಾಗೂ ಭಾರತ್ ಕೇಸರಿ ಖ್ಯಾತಿಯ ರೇಮಂಡ್ ಡಿಸೋಜಾ ಅರ್ಬನ್ ಹಾಥ್ ಮೈದಾನದಲ್ಲಿ ಉದ್ಘಾಟಿಸಿದರು. ಈ ಕ್ರೀಡಾಕೂಟದಲ್ಲಿ ಜಿಲ್ಲೆಯ 12 ಪುರುಷರ ತಂಡ ಮತ್ತು 8 ಮಹಿಳೆಯರ ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ ಎ ಬಿ ಇಬ್ರಾಹೀಂ, ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಎಸ್ ಎ ಪ್ರಭಾಕರ್ ಶರ್ಮ, ಪಿಲಿಕುಳ ಬಯೋಲಜಿಕಲ್ ಪಾರ್ಕ್ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ , ಸ್ಥಳೀಯ ಮನಪಾ ಸದಸ್ಯೆ ಹೇಮಲತ ಉಪಸ್ಥಿತರಿದ್ದರು.