ಪಿಲಿಕುಳದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ :ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮ
ಮಂಗಳೂರು,ಫೆ.28: ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಪಿಲಿಕುಳದಲ್ಲಿ ಆಯೋಜಿಸಲಾಗಿದ್ದ ಪಿಲಿಕುಳ ಸಂಭ್ರಮದ ಪ್ರಯುಕ್ತ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ರಾಷ್ಟ್ರೀಯ ವಿಜ್ಞಾನ ದಿನ ವನ್ನು ಇಂದು ಆಚರಿಸಲಾಯಿತು.
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಆಯ್ದ ಹೈಸ್ಕೂಲ್ ಮಕ್ಕಳಿಗೆ ವಿಜ್ಞಾನ ವಿಷಯಗಳಿಗೆ ಸಂಬಂಧಪಟ್ಟ ರಸಪ್ರಶ್ನೆ, ಆಶುಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಯನ್ನು ಮತ್ತು ಶಿಕ್ಷಕರಿಗೆ ಬಯೋಟೆಕ್ , ರೋಬೋಟೆಕ್ ಮತ್ತು ಇಲೆಕ್ಟ್ರಾನಿಕ್ ಕಮ್ಯುನಿಕೇಶನ್‌ನ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಾಂತ್ರಿಕ ಮಾಹಿತಿಗಳ ಕಾರ್ಯಕ್ರಮ ಮತ್ತು ಮಾದರಿಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. 12 ಇಂಜಿನಿಯರಿಂಗ್ ಕಾಲೇಜುಗಳಿಂದ 185 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 21 ತಂಡಗಳ ಮಾದರಿ ಪ್ರದರ್ಶನಗಳು ನಡೆದರೆ 19 ತಂಡಗಳಿಂದ ತಾಂತ್ರಿಕ ಮಾಹಿತಿಗಳ ಕಾರ್ಯಕ್ರಮ ನಡೆಯಿತು.
1.80 ಕೋಟಿ ವೆಚ್ಚದಲ್ಲಿ ಅನ್ವೇಷಣಾ ಕೇಂದ್ರಗಳ ಸಮುಚ್ಚಯ:
ಪಿಲಿಕುಳ ರಾಷ್ಟ್ರೀಯ ವಿಜ್ಞಾನ ಕೇಂದ್ರದಲ್ಲಿ 1.80 ಕೋಟಿ ವೆಚ್ಚದಲ್ಲಿ ಅನ್ವೇಷಣಾ ಕೇಂದ್ರಗಳ ಸಮುಚ್ಚಯವನ್ನು ಸ್ಥಾಪಿಸಲಾಗುತ್ತಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಹೇಳಿದರು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಈ ಅನ್ವೇಷಣಾ ಕೇಂದ್ರಗಳ ಸಮುಚ್ಚಯ ಆರಂಭಿಸಲಾಗುತ್ತಿದ್ದು ರಾಜ್ಯ ಸರಕಾರ 90 ಲಕ್ಷ ಮತ್ತು ಕೇಂದ್ರ ಸರಕಾರ 90 ಲಕ್ಷ ಹಣವನ್ನು ನೀಡುತ್ತಿದೆ. 3 ವರ್ಷಗಳ ಕಾಲ ತಲಾ 20 ಲಕ್ಷ ರೂಪಾಯಿಯನ್ನು ರಾಜ್ಯ ಸರಕಾರ ನಿರ್ವಹಣೆಗೆಂದು ನೀಡಲಿದೆ ಎಂದು ಅವರು ಹೇಳಿದರು.
ಗಮಸೆಳೆದ ವಿದ್ಯಾರ್ಥಿಗಳ ಮಾದರಿ ಪ್ರದರ್ಶನ
ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಹೊಸ ಯೋಜನೆಗಳ ಮಾದರಿಗಳ ಪ್ರದರ್ಶನವನ್ನು ಆಯೋಜಿಸಿದ್ದು ಇವುಗಳು ವಿಜ್ಞಾನಾಸಕ್ತರ ಗಮನಸೆಳೆಯಿತು.
ವಾಮಂಜೂರು ಸಂತ ಜೋಸೆಫ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತ್ಯಾಜ್ಯ ಪ್ಲಾಸ್ಟಿಕ್‌ನಿಂದ ಇಟ್ಟಿಗೆ ನಿರ್ಮಾಣ ಮಾಡುವ ತಂತ್ರಜ್ಞಾನದ ಪ್ರದರ್ಶನ ನೀಡಿದರು. ಮಣ್ಣಿನಿಂದ ಬಿಸಿ ಮಾಡಿ ತಯಾರಿಸುವ ಇಟ್ಟಿಗೆಯ ಆಕಾರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಮಾಡುವ ಇಟ್ಟಿಗೆಯನ್ನು ತಯಾರಿಸುವ ತಂತ್ರಜ್ಞಾನ ಮಾಡಿರುವುದು ಪರಿಸರಕ್ಕೆ ಪೂರಕವಾದ ಕಾರಣ ಎಲ್ಲರ ಆಕರ್ಷಣೆಗೆ ಪಾತ್ರವಾಯಿತು. ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಇಟ್ಟಿಗೆಯು 9 ಟನ್ ಸಾಮರ್ಥ್ಯವನ್ನು ತಡೆದುಕೊಳ್ಳುವ ಸಾಮರ್ಥ್ಯವಿದ್ದರೆ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಇಟ್ಟಿಗೆಯು 17 ಟನ್ ಸಾಮರ್ಥ್ಯವನ್ನು ತಡೆದುಕೊಳ್ಳುವ ಸಾಮಥ್ಯವಿದೆ .
ಅದೇ ರೀತಿ ಶ್ರೀನಿವಾಸ ಇನ್ಸಿಟೂಟ್ ಆಫ್ ಟೆಕ್ನೋಲಜಿಯ ವಿದ್ಯಾರ್ಥಿಗಳ ಮಾನವರಹಿತ ವಿಮಾನದ ಮಾದರಿ, ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ರಾಸಾಯನಿಕ ಸಿಂಪಡಣೆ ಮಾಡಲು ಅನುಕೂಲವಾಗುವ ಯಂತ್ರ, 3ಡಿ ಪ್ರಿಂಟರ್ ಗಮನಸೆಳೆಯಿತು.