ಮೋದಿ ಆಳ್ವಿಕೆಯಲ್ಲಿ ಮುಸ್ಲಿಮರು ಸುರಕ್ಷಿತರಲ್ಲ: ಶಾಹಿದ್ ರಫಿ
ಆಗ್ರಾ,ಫೆ.29: ಪ್ರಧಾನಿ ಮೋದಿಯ ಆಡಳಿತದಲ್ಲಿ ಅಲ್ಪಸಂಖ್ಯಾತರು ಅದರಲ್ಲೂ ಮುಖ್ಯವಾಗಿ ಮುಸ್ಲಿಮರು ಸುರಕ್ಷಿತರಲ್ಲ ಎಂದು ಪ್ರಸಿದ್ಧ ಗಾಯಕ ಮುಹಮ್ಮದ್ ರಫಿ ಅವರ ಪುತ್ರ ಶಾಹಿದ್ ರಫಿ ಹೇಳಿದ್ದಾರೆ.
ಅವರು, ತನ್ನ ತಂದೆ ಮುಹಮ್ಮದ್ ರಫಿಗೆ ಮರಣಾ ನಂತರ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬ ಬೇಡಿಕೆಯನ್ನು ಪುನರುಚ್ಛರಿಸಿದ್ದಾರೆ.
ಮೂರನೆ ತಾಜ್ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿದ ಶಾಹಿದ್ ರಫಿ ಇಂದು ದೇಶದಲ್ಲಿರುವ ಪರಿಸ್ಥಿಯನ್ನು ಉಲ್ಲೇಖಿಸುತ್ತಾ "ಈಗಿನ ಆಡಳಿತದಿಂದ ದೇಶದ ಮುಸ್ಲಿಮರು ಭೀತರಾಗಿದ್ದಾರೆ. ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ ನಡೆದಿರುವ ಕಾರ್ಯಾಚರಣೆಯಾಗಿರಲಿ, ಅಲ್ಪಸಂಖ್ಯಾತರ ವಿರುದ್ಧ ನಡೆಯುವ ಧಾಳಿಯಾಗಿರಲಿ ಎಲ್ಲವೂ ಸೇರಿ ಸ್ಥಿತಿ ನಿರಾಶಜನಕವಾಗಿದೆ" ಎಂದು ಹೇಳಿದ್ದಾರೆ.
ಕಳೆದ ತಿಂಗಳು ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಮೊದಲು ಅವರು ಮಹಾರಾಷ್ಟ್ರ ಚುನಾವಣೆಯ ವೇಳೆ ಅಸದುದ್ದೀನ್ ಉವೈಸಿಯವರ ಎಐಎಮ್‌ಐಎಮ್ ನ ಟಿಕೆಟ್‌ನಲ್ಲಿ ಮುಂಬಾದೇವಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು . ತಾನು ಕಾಂಗ್ರೆಸ್‌ನ್ನು ಯಾಕೆ ಸೇರಿದೆ ಎಂಬುದನ್ನು ಸ್ಪಷ್ಟಪಡಿಸುತ್ತಾ ಅದೊಂದು ಜಾತ್ಯತೀತ ಪಕ್ಷ ಎಂಬ ನೆಲೆಯಲ್ಲಿ ಆಯ್ಕೆ ಮಾಡಿಕೊಂಡೆ ಎಂದು ಹೇಳಿದ್ದಾರೆ.
ತಾನು ದೇಶದಲ್ಲಿ ಎಲ್ಲೇ ಹೋದರು ತಂದೆಯ ಅಭಿಮಾನಿಗಳು ಪ್ರೀತಿ ತೋರಿಸುತ್ತಾರೆ. ರಫಿಯ ಪುತ್ರನಾಗಿರುವುದು ತನಗೆ ಹೆಮ್ಮೆಯ ವಿಚಾರವಾಗಿದೆ. ತನ್ನ ತಂದೆ ಭಾರತ ರತ್ನವಾಗಿದ್ದರು. ಆದ್ದರಿಂದ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿದರೆ ಅವರ ಅಭಿಮಾನಿಗಳು ತುಂಬ ಸಂತೋಷ ಪಡುವರು ಎಂದಿದ್ದಾರೆ.
ಇದೇ ವೇಳೆ ತನ್ನ ತಂದೆಯನ್ನು ಒಬ್ಬ ಗೆಳೆಯ, ಸಜ್ಜನ ಕೌಟುಂಬಿಕ ವ್ಯಕ್ತಿಯಾಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಶಾಹಿದ್ ರಫಿ ಸ್ಟೇಜ್ ಶೋ ನೀಡುವ ಜೊತೆಗೆ ಬಟ್ಟೆ ಉದ್ಯಮಿ ಕೂಡಾ ಆಗಿದ್ದಾರೆ.