ವಿದ್ಯುತ್ ಸಮಸ್ಯೆಯಿಂದ ರೋಸಿ ಗ್ರಾಹಕನಿಂದ ಸಚಿವರಿಗೆ ಫೋನ್
ಸುಳ್ಯ: ನಿರಂತರ ವಿದ್ಯುತ್ ಸಮಸ್ಯೆಯಿಂದ ರೋಸಿ ಹೋದ ಗ್ರಾಹಕರೊಬ್ಬರು ಇಂಧನ ಸಚಿವರಿಗೆ ಫೋನ್ ಮಾಡಿ ಬೈದ ಆರೋಪದಲ್ಲಿ ಸುಳ್ಯ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಬೆಳ್ಳಾರೆಯ ವರ್ತಕರ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ ರೈ ಯವರು ಪವರ್‌ಕಟ್ ಇದ್ದ ಸಂದರ್ಭದಲ್ಲಿ ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಫೋನ್ ಮಾಡಿ ಪ್ರಶ್ನಿಸಿದರೆನ್ನಲಾಗಿದೆ. ಈ ವೇಳೆ ಸಚಿವರು ಸ್ಪಂದಿಸಿಲ್ಲ ಎಂದು ಆಕ್ರೋಶಗೊಂಡ ಗಿರಿಧರ ರೈ ಸಚಿವರಿಗೆ ಹಾಗೂ ಇಲಾಖಾಧಿಕಾರಿಗಳಿಗೆ ಅಸಭ್ಯ ಪದದಿಂದ ಬೈದರೆನ್ನಲಾಗಿದೆ. ಸಚಿವರು ಫೋನ್ ಕಟ್ ಮಾಡಿ ಪೊಲೀಸ್ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಪೊಲೀಸ್ ಉನ್ನತಾಧಿಕಾರಿಗಳು ಸುಳ್ಯ ಪೊಲೀಸರಿಗೆ ಆರೋಪಿಯನ್ನು ಬಂಧಿಸುವಂತೆ ಸೂಚಿಸಿದ್ದು, ಗಿರಿಧರ ರೈಯವರನ್ನು ಬಂಧಿಸಲೆಂದು ಅವರ ಮನೆಗೆ ತೆರಳಿದಾಗ ಅವರು ಬಾಗಿಲು ತೆರೆಯಲಿಲ್ಲವೆನ್ನಲಾಗಿದೆ. ಹೀಗಾಗಿ ಹೆಂಚು ಒಡೆದು ಒಳಪ್ರವೇಶಿಸಿ ರೈಯವರನ್ನು ಬಂಧಿಸಿದ ಸುಳ್ಯ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ. ಗಿರಿಧರ ರೈ ಅವರ ಮೇಲೆ ನಿಂದನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಲಾಗಿದೆ.