2000 ಬೆದರಿಕೆ ಕರೆ ಬರಲು ಈ ಖ್ಯಾತ ಟಿವಿ ಪತ್ರಕರ್ತೆ ಮಾಡಿದ ಪ್ರಮಾದವೇನು ಗೊತ್ತೇ ?
ತಿರುವನಂತಪುರಮ್ , ಫೆ. 29 : ಕೇರಳದ ಖ್ಯಾತ ಸುದ್ದಿ ವಾಹಿನಿ ಏಶಿಯ ನೆಟ್ ನ್ಯೂಸ್ ನ ಮುಖ್ಯ ಸಂಯೋಜನಾ ಸಂಪಾದಕಿ ಸಿಂಧು ಸೂರ್ಯಕುಮಾರ್ ಅವರಿಗೆ ಮಹಿಷಾಸುರ ಜಯಂತಿ ಕುರಿತು ಕಾರ್ಯಕ್ರಮ ನಡೆಸಿದ್ದೇ ದುಬಾರಿಯಾಗಿ ಪರಿಣಮಿಸಿದೆ. ಮಹಿಷಾಸುರ ಜಯಂತಿ ಆಚರಿಸುವುದು ದೇಶದ್ರೋಹವಾಗುತ್ತದೆಯೇ ಎಂಬ ವಿಷಯದ ಕುರಿತು ತಮ್ಮ ಸುದ್ದಿ ವಾಹಿನಿಯಲ್ಲಿ ಸಿಂಧು ಕಾರ್ಯಕ್ರಮವೊಂದನ್ನು ಸಮನ್ವಯ ಮಾಡಿದ್ದರು. ಆದರೆ ಇದರಿಂದ ಕೆರಳಿದ ಕೆರಳಿರುವ ಸಂಘ ಪರಿವಾರದ ಬೆಂಬಲಿಗರು ಅವರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವಿದೇಶಗಳಿಂದಲೂ ಇಂತಹ ಕರೆಗಳು ಬಂದಿವೆ ಎಂದು ದಿ ನ್ಯೂಸ್ ಮಿನಿಟ್ ವೆಬ್ ಸೈಟ್ ವರದಿ ಮಾಡಿದೆ.
ಕಾಂಗ್ರೆಸ್ ಸಂಸದ ಅಂತೋ ಅಂಟನಿ, ಸಿಪಿಎಂ ಸಂಸದ ಎಂ ಬಿ ರಾಜೇಶ್ ಹಾಗು ಬಿಜೆಪಿ ವಕ್ತಾರ ವಿವಿ ರಾಜೇಶ್ ಅವರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸಿಂಧು ಅವರಿಗೆ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಸಿಂಧು " ದುರ್ಗೆಯನ್ನು ಲೈಂಗಿಕ ಕಾರ್ಯಕರ್ತೆ " ಎಂದು ಹೇಳಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ವದಂತಿ ಹರಡಿದ ಕಿಡಿಗೇಡಿಗಳು ಫೇಸ್ ಬುಕ್ ಹಾಗು ವಾಟ್ಸ್ ಆಪ್ ಗಳಲ್ಲಿ ಈ ಕುರಿತು ಸಿಂಧುವನ್ನು ಪ್ರಶ್ನಿಸುವಂತೆ ಆಕೆಯ ಮೊಬೈಲ್ ನಂಬರನ್ನೂ ನೀಡಿದ್ದರು. ಸಿಂಧು ಅವರ ಪ್ರಕಾರ ಅವರಿಗೆ ಕರೆ ಮಾಡಿ ನಿಂದಿಸಿದ 98% ಜನ ಅವರ ಕಾರ್ಯಕ್ರಮವನ್ನೇ ವೀಕ್ಷಿಸಿಲ್ಲ.
ನಿರಂತರ ಬರುತ್ತಿರುವ ನಿಂದನೆಯ ಕರೆಗಳಿಂದ ಸಿಂಧು ಆಘಾತಕ್ಕೊಳಗಾಗಿದ್ದಾರೆ. " ಕಾರ್ಯಕ್ರಮ ಏನೆಂದೇ ಅವರು ತಿಳಿಯುವ ಗೋಜಿಗೆ ಹೋಗಿಲ್ಲ. ಈಗಲೂ ನನಗೆ ಬೆದರಿಕೆ ಕರೆಗಳು ಬರುತ್ತಲೇ ಇವೆ. ಹೊಡೆಯುವ, ಕೊಲ್ಲುವ ಮಾತನಾಡುವ ಅವರು ನನ್ನನ್ನು ವೇಶ್ಯೆ ಎಂದೂ ಜರೆಯುತ್ತಿದ್ದಾರೆ. ಸುಮಾರು 2000 ಕಾಲ್ ಗಳು ಬಂದಿವೆ. ವಿದೇಶಗಳಿಂದಲೂ ಕಾಲ್ ಬರುತ್ತಿವೆ. " ಎಂದು ಸಿಂಧು ಹೇಳಿದ್ದಾರೆ. ಸಿಂಧುಗೆ ಕಾಲ್ ಮಾಡಿದವರು ತಮ್ಮನ್ನು ಆರೆಸ್ಸೆಸ್ ಹಾಗು ಬಿಜೆಪಿ ಹಿತೈಷಿಗಳು ಎಂದು ಹೇಳಿಕೊಂಡಿದ್ದಾರೆ.
ಸಿಂಧು ತಿರುವನಂತಪುರಮ್ ಪೋಲಿಸ್ ಕಮಿಷನರ್ ಗೆ ದೂರು ಸಲ್ಲಿಸಿದ್ದು ಎಫ್ ಐ ಆರ್ ದಾಖಲಾಗಿದೆ.
ಸಿಂಧು ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ವಕ್ತಾರ ವಿವಿ ರಾಜೇಶ್ ಅವರು ಶನಿವಾರ ಸಿಂಧು ಗೆ ಕರೆ ಮಾಡಿ ನಿಮಗೆ ನಾವು ಬೆಂಬಲಿಸುವುದಾಗಿ ಹೇಳಿದ್ದರು . ಇದೇ ಹೇಳಿಕೆಯನ್ನು ಬಹಿರಂಗವಾಗಿ ನೀಡಿದರೆ ಉತ್ತಮ ಎಂದು ಸಿಂಧು ಹೇಳಿದ್ದಕ್ಕೆ ಅದಕ್ಕೆ ನಾನು ರಾಜ್ಯಾಧ್ಯಕ್ಷರ ಅನುಮತಿ ಪಡೆಯಬೇಕು ಎಂದು ಅವರು ಹೇಳಿದರು. ಆದರೆ ಈವರೆಗೆ ಅವರು ಬಹಿರಂಗ ಹೇಳಿಕೆ ನೀಡಿಲ್ಲ.