ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿಶೇಷ ತರಗತಿ ಆರಂಭ
ಸುಳ್ಯ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆಯೊಂದಿಗೆ ಸುಳ್ಯದ ರೋಟರಿ ಕ್ಲಬ್ ಕೈಜೋಡಿಸಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆರಂಭಿಸಿದೆ.
ಮುಂದಿನ ಮೂರು ದಿನಗಳ ಕಾಲ ತಾಲೂಕಿನ ಎಲ್ಲಾ ಪ್ರೌಢಶಾಲೆಗಳಲ್ಲಿ ತಜ್ಞ ಸಂಪನ್ಮೂಲ ವ್ಯಕ್ತಿಗಳು ತರಗತಿಗಳನ್ನು ನಡೆಸಿಕೊಡಲಿದ್ದಾರೆ. ಈ ಉದ್ದೇಶಕ್ಕೆ ರೋಟರಿ ಸಂಸ್ಥೆಯಿಂದ 30 ಸಾವಿರ ವೆಚ್ಚದಲ್ಲಿ ‘ಖಂಡಿತಾ ಸಾಧ್ಯ’ ಎಂಬ ಕೈಪಿಡಿಯನ್ನು ಹೊರತರಲಾಗಿದ್ದು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇದನ್ನು ಹಂಚಲಾಗುವುದು. ಸುಳ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ವಿಶೇಷ ತರಗತಿಗಳ ಉದ್ಘಾಟನೆ ನಡೆಯಿತು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಂ.ಟಿ.ವೀಣಾ ಕಾರ್ಯಕ್ರಮ ಉದ್ಘಾಟಿಸಿದರು. ಇಂತಹ ತರಬೇತಿಯ ಅಗತ್ಯತೆ ಮತ್ತು ಅನಿವಾರ್ಯತೆ ಇತ್ತು. ಇದರಿಂದ ಫಲಿತಾಂಶ ಹೆಚ್ಚಿಸಲು ಸಾಧ್ಯವಾಗಲಿದೆ. ಅದನ್ನು ರೋಟರಿ ಕ್ಲಬ್‌ನವರು ನಡೆಸಿಕೊಡುತ್ತಿರುವುದು ಶ್ಲಾಘನೀಯ ಎಂದರು.
ರೋಟರಿ ಕ್ಲಬ್ ಸದಸ್ಯ ಗಣೇಶ್ ಭಟ್ ಪುಸ್ತಕ ಬಿಡುಗಡೆ ಮಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಬೆಳ್ಯಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕ ರಚನೆ ಸಮಿತಿಯ ಬಿ.ಎಸ್.ಸಂಧ್ಯಾಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಉಪ ಪ್ರಾಂಶುಪಾಲೆ ಜಯಶ್ರೀ, ರೋಟರಿ ಕ್ಲಬ್ ನಿರ್ದೇಶಕ ದಯಾನಂದ ಆಳ್ವ ವೇದಿಕೆಯಲ್ಲಿದ್ದರು. ಚಂದ್ರಶೇಖರ ಪೇರಾಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.