ಪುತ್ತೂರು ಹಲ್ಲೆ ಪ್ರಕರಣ: ಓರ್ವ ಬಂಧನ
ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಪಂ ಸದಸ್ಯರ ಮನೆಗೆ ದಾಳಿ ನಡೆಸಿ ದಾಂಧಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೈಕಿ ರಾಜೇಶ್ ಎಂತಾತನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾದ ಸ್ಥಳದಲ್ಲಿ ಪತ್ತೆಯಾದ ನಾಲ್ಕು ಬೈಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಚುನಾವಣಾ ವಿಜಯೋತ್ಸವ ವೇಳೆ ನಡೆದ ಘರ್ಷಣೆಯ ವಿಚಾರಕ್ಕೆ ಸಂಬಂಧಿಸಿ ಪಳ್ಳತ್ತೂರು ಬಂಟಕಲ್ಲು ನಿವಾಸಿ ರಿಕ್ಷಾ ಚಾಲಕ ಪ್ರವೀಶ್ ನಾಯರ್ ಮೇಲೆ ಸುಮಾರು 15 ಜನರ ತಂಡ ಹಲ್ಲೆ ನಡೆಸಿದೆ. ನೆಟ್ಟಣಿಗೆ ಮುಡ್ನೂರು ಗ್ರಾಪಂ ಸದಸ್ಯ ಇಬ್ರಾಹಿಂ ಎಂಬವರ ತಂದೆಯ ಮನೆಗೆ ರಾತ್ರಿ ವೇಳೆ ದಾಳಿ ನಡೆಸಿದ ತಂಡವು ಮನೆಗೆ ಹಾನಿಗೊಳಿಸಿ, ಕಾರನ್ನು ಜಖಂಗೊಳಿಸಿತ್ತು. ಮನೆ ಮಂದಿಗೆ ಹಲ್ಲೆ ನಡೆಸಿ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಲಾಗಿತ್ತು. ಈ ಬಗ್ಗೆ ಸ್ಥಳೀಯರಾದ ಪ್ರವೀಶ್ ನಾಯರ್ ಅವರ ಸಹೋದರ ರಾಜೇಶ್ ಸೇರಿದಂತೆ 6 ಮಂದಿಯ ವಿರುದ್ದ ಕೇಸು ದಾಖಲಾಗಿತ್ತು
ಸೋಮವಾರ ಎಎಸ್ಪಿ ರಿಷ್ಯಂತ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಬೈಕ್‌ಗಳನ್ನು ಬಿಟ್ಟು ತಂಡ ಓಟಕ್ಕಿತ್ತಿದೆ. ಇದರಿಂದ ಸ್ಥಳದಲ್ಲಿ ಸಿಕ್ಕಿದ ನಾಲ್ಕು ಬೈಕ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರವೀಶ್ ನಾಯರ್ ಅವರ ಸಹೋದರ ರಾಜೇಶ್ ಎಂಬವರನ್ನು ಬಂಧಿಸಲಾಗಿದೆ. ತಂಡದ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.