ಅಮೇರಿಕದ ಉಪಾಧ್ಯಕ್ಷರೆದುರೇ ' ದುರಾಸೆಯ ರಾಜಕೀಯ' ದ ವಿರುದ್ಧ ಹೋರಾಡಲು ಕರೆ ನೀಡಿದ ಲಿಯೋನಾರ್ಡೋ
ಲಾಸ್ ಎಂಜಲೀಸ್ , ಫೆ. 29 : ಸೋಮವಾರ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿಗೆ ಪಾತ್ರವಾದ ಖ್ಯಾತ ನಟ ಲಿಯೋನಾರ್ಡೋ ಡಿ ಕ್ಯಾಪ್ರಿಯೋ ತನ್ನ ಪ್ರಶಸ್ತಿ ಸ್ವೀಕಾರ ಭಾಷಣವನ್ನು 'ಹವಾಮಾನ ಬದಲಾವಣೆ ' ಯಾ ಜಾಗತಿಕ ಸಮಸ್ಯೆ ಕುರಿತ ಜಾಗೃತಿ ಮೂಡಿಸಲು ಮೀಸಲಾಗಿಟ್ಟು ಗಮನ ಸೆಳೆದರು.
" ನನಗಿಷ್ಟೇ ಹೇಳಲಿರುವುದು - ' ದಿ ರೆವೆನೆಂಟ್ ಚಿತ್ರ ಈ ಜಗತ್ತಿನೊಂದಿಗೆ ಮನುಷ್ಯನ ಸಂಬಂಧದ ಕುರಿತು ಆಗಿದೆ. ಈ ಜಗತ್ತಿಗೆ ಕಳೆದ ವರ್ಷ ಇತಿಹಾಸದಲ್ಲೇ ಅತಿ ಹೆಚ್ಚು ಬಿಸಿಯಾದ ವರ್ಷವಾಗಿತ್ತು ಎಂಬುದು ನಮಗೆ ಗೊತ್ತಿದೆ. ಹವಾಮಾನ ಬದಲಾವಣೆ ಇಂದಿನ ವಾಸ್ತವವಾಗಿದೆ. ಅದು ಈಗ ಆಗುತ್ತಿದೆ. ನಮ್ಮ ಇಡೀ ಮನುಕುಲಕ್ಕೆ ಹಾಗು ಎಲ್ಲ ಜೀವಿಗಳಿಗೆ ಇರುವ ಅತಿ ದೊಡ್ಡ ಹಾಗು ತುರ್ತಾದ ಬೆದರಿಕೆಯಾಗಿದೆ ಅದು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಹಾಗು ಇನ್ನು ತಡ ಮಾಡಬಾರದು. ಪರಿಸರ ಮಾಲಿನ್ಯ ಮಾಡುವವರು ಹಾಗು ದೊಡ್ಡ ಕಾರ್ಪೋರೆಟ್ ಗಳ ಪರ ಮಾತನಾಡದೆ, ಇಡೀ ಮನುಕುಲಕ್ಕಾಗಿ, ಇಲ್ಲಿನ ಮೂಲನಿವಾಸಿಗಳಿಗಾಗಿ ಮಾತನಾಡುವ ಜಾಗತಿಕ ನಾಯಕರನ್ನು ನಾವು ಬೆಂಬಲಿಸಬೇಕಾಗಿದೆ. ಹಾಗು ದುರಾಸೆಯ ರಾಜಕೀಯಕ್ಕೆ ಬಲಿಯಾಗಿರುವ ಬಿಲಿಯಗಟ್ಟಲೆ ವಂಚಿತ ಜನರಿಗಾಗಿ ನಾವು ಕೆಲಸ ಮಾಡಬೇಕಾಗಿದೆ " ಎಂದು ಲಿಯೋನಾರ್ಡೋ ಹೇಳಿದಾಗ ಎಲ್ಲ ಸಭಿಕರು ಎದ್ದು ನಿಂತು ಭರ್ಜರಿ ಚಪ್ಪಾಳೆಯ ಮೂಲಕ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಅಮೇರಿಕಾದ ಉಪಾಧ್ಯಕ್ಷ ಜೋ ಬಿಡೆನ್ ಸಭಿಕರ ನಡುವೆ ಉಪಸ್ಥಿತರಿದ್ದಿದ್ದು ವಿಶೇಷವಾಗಿತ್ತು.