ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ಸಂವಿಧಾನ ವಿರೋಧಿ : ಪಿಎಫ್‌ಐ
ಮಂಗಳೂರು,ಫೆ.29:ಉ.ಕ ಬಿಜೆಪಿ ಸಂಸದರಾದ ಅನಂತ ಕುಮಾರ್ ಹೆಗಡೆ ಪತ್ರಿಕಾಗೋಷ್ಟಿಯಲ್ಲಿ ಇಸ್ಲಾಂ ಇರುವವರೆಗೆ ಭಯೋತ್ಪಾದನೆ ನಿರ್ಮೂಲನೆ ಸಾಧ್ಯವಿಲ್ಲ ಎಂಬ ಹೇಳಿಕೆಯು ಅವರ ಅಂತರಂಗದಲ್ಲಿರುವ ಮುಸ್ಲಿಂ ವಿರೋಧಿ ಚಿಂತನೆಯ ಪ್ರತಿಫಲನವಾಗಿದ್ದು ನಮ್ಮ ದೇಶದ ಸಂವಿಧಾನದಕ್ಕೆ ವಿರುಧ್ಧವಾದ ಹೇಳಿಕೆಯಾಗಿದೆ. ಆದುದರಿಂದ ಕೂಡಲೇ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
ದೇಶದ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು ಎಲ್ಲಾ ಜಾತಿ ಮತ ಧರ್ಮದವರನ್ನು ಸಮಾನವಾಗಿ ಕಾಣಬೇಕಾದದ್ದು ಒಬ್ಬ ಜನಪ್ರತಿನಿಧಿಯ ಕರ್ತವ್ಯವಾಗಿದೆ. ದೇಶದ ಏಕತೆಯನ್ನು ಎತ್ತಿಹಿಡಿಯಬೇಕಾದವರೇ ಈ ರೀತಿಯ ಹೇಳಿಕೆಯನ್ನು ನೀಡಿರುವುದು ಗಂಭೀರ ಸ್ವರೂಪದಾಗಿದ್ದು ಅಪಾಯಕಾರಿ ಬೆಳವಣಿಗೆಯಾಗಿದೆ. ಮಾನವೀಯ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುವ ಇಸ್ಲಾಂ ಧರ್ಮದ ಬಗ್ಗೆ ಈ ರೀತಿಯ ಆರೋಪ ಹೊರಿಸಿರುವುದು ಸಂಘಪರಿವಾರದ ಫ್ಯಾಶಿಷ್ಟ್ ಚಿಂತನೆಯ ಭಾಗವಾಗಿದೆ . ಈ ಹೇಳಿಕೆಯ ಮೂಲಕ ಮುಸ್ಲಿಮರ ಬಗೆಗಿನ ಬಿಜೆಪಿಯ ನಿಲುವು ಮತ್ತೊಮ್ಮೆ ಸಾಬೀತಾಗಿದೆ. ಆದುದರಿಂದ ಇದರ ವಿರುದ್ದ ಎಲ್ಲಾ ಜಾತ್ಯಾತೀತ ಶಕ್ತಿಗಳು ಒಂದಾಗಿ ಹೋರಾಟ ನಡೆಸಬೇಕಾಗಿದೆ ಎಂದು ಅವರು ಆಗ್ರಹಿಸಿದರು.