ಅನಂತಕುಮಾರ್ ಹೆಗಡೆ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿ: ದ.ಕ. ಖಾಝಿ ಆಗ್ರಹ
ಮಂಗಳೂರು,ಫೆ.29: ಕೆನರಾ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆಯವರು ಶಿರಸಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ನೀಡಿದ ಇಸ್ಲಾಂ ವಿರೋಧಿ ಹೇಳಿಕೆ ಅತ್ಯಂತ ಖಂಡನಾರ್ಹವಾಗಿದ್ದು, ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವ ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಅವಹೇಳನಗೊಳಿಸುವ ರೀತಿಯದ್ದಾಗಿದೆ. ಅಪರಾಧ ಕೃತ್ಯಕ್ಕೆ ಧಾರ್ಮಿಕ ನಂಟು ಕಲ್ಪಿಸುವುದು ತೀರಾ ಬಾಲಿಶ. ಸಂಸದರಾಗಿ ನಾಲಗೆ ಮತ್ತು ಪದಗಳ ಮೇಲೆ ಹಿಡಿತವಿರಿಸಬೇಕಾಗಿದ್ದ ಹೆಗಡೆಯವರು ಇಸ್ಲಾಮಿನ ಬಗ್ಗೆ ಹಗುರವಾಗಿ ಮಾತನಾಡಿ, ತನ್ನ ಗೌರವವನ್ನೇ ಮಣ್ಣುಪಾಲು ಮಾಡಿಕೊಂಡಿದ್ದಾರೆ. ಮೇಲೆ ನೋಡಿ ಉಗುಳುವ ಈ ಬಗೆಯ ವರ್ತನೆಯು ಅತ್ಯಂತ ಹೀನ ಮತ್ತು ಆತಂಕಕಾರಿಯಾದುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಹೇಳಿದ್ದಾರೆ.
ನಾಶ ಮಾಡಬೇಕಾದುದು ಧರ್ಮವನ್ನಲ್ಲ, ಧರ್ಮಾಂಧತೆಯನ್ನಾಗಿದೆ. ಹೆಗಡೆಯವರ ಹೇಳಿಕೆಯನ್ನು ನೋಡುವಾಗ ಅವರು ಧರ್ಮಾಂಧತೆಯಿಂದ ಕುರುಡರಾಗಿರುವಂತೆ ಕಾಣಿಸುತ್ತಿದೆ. ಜನಪ್ರತಿನಿಧಿಯಾಗಿ ಎಚ್ಚರಿಕೆಯಿಂದ ಮಾತನಾಡಬೇಕಾದವರು ತೀರಾ ಉಡಾಫೆಯಿಂದ ವರ್ತಿಸುವ ಮೂಲಕ ತನ್ನ ಸಂಸದ ಸ್ಥಾನಕ್ಕೆ ಚ್ಯುತಿ ತಂದಿದ್ದಾರೆ. ಅವರ ಮೇಲೆ ರಾಜ್ಯ ಸರಕಾರ ಕಾನೂನು ಕ್ರಮ ಕೈಗೊಳ್ಳಲು ಮುಂದಾಬೇಕು ಎಂದವರು ಆಗ್ರಹಿಸಿದ್ದಾರೆ.