ಪತ್ರಕರ್ತ ಆಸೀಫ್ ಸರಳೀಕಟ್ಟೆಗೆ ಹಲ್ಲೆ: ಉಪ್ಪಿನಂಗಡಿಯಲ್ಲಿ ಪತ್ರಕರ್ತರಿಂದ ಪ್ರತಿಭಟನೆ
ಉಪ್ಪಿನಂಗಡಿ: ಸಮಾಜಘಾತುಕ ಶಕ್ತಿಗಳಿಂದಾಗಿ ಪತ್ರಕರ್ತರು ಸೇರಿದಂತೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಅರಕ್ಷಕರೂ ಸಮಾಜಘಾತುಕ ಶಕ್ತಿಗಳೊಂದಿಗೆ ಕೈಜೋಡಿಸುತ್ತಿದ್ದು, ಅನ್ಯಾಯಕ್ಕೊಳಗಾದವರಿಗೆ ಇಲ್ಲಿ ನ್ಯಾಯ ಮರೀಚಿಕೆಯಾಗಿದೆ. ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಟಿವಿ ವರದಿಗಾರ ಭರತ್ ಒತ್ತಾಯಿಸಿದರು.
ಅವರು ಸೋಮವಾರ ಉಪ್ಪಿನಂಗಡಿ ಠಾಣೆ ಮುಂದೆ ನಡೆದ ಪತ್ರಕರ್ತರ ಧರಣಿಯನ್ನುದ್ದೇಶಿಸಿ ಮಾತನಾಡಿ ಪತ್ರಕರ್ತ ಆಸೀಫ್ ಸರಳಿಕಟ್ಟೆ ಅವರ ಮೇಲೆ ಇತ್ತೀಚೆಗೆ ಗಾಂಜಾ ಮಾಫಿಯಾದವರಿಂದ ನಡೆದ ಹಲ್ಲೆ ಪ್ರಕರಣವನ್ನು ಉಪ್ಪಿನಂಗಡಿಯ ಠಾಣಾಧಿಕಾರಿಯವರು ಲಘುವಾಗಿ ಪರಿಗಣಿಸುವ ಮೂಲಕ ಈ ಪ್ರಕರಣದ ಆರೋಪಿಗಳ ಪರ ನಿಂತಿದ್ದಾರೆ ಎಂದು ಆರೋಪಿಸಿದರು.
ವರದಿಗಾರ ಆಸೀಫ್ ಅವರ ಮೇಲೆ ಹಲ್ಲೆ ನಡೆಸಿದವರು ಗಾಂಜಾ ಮಾಫಿಯಾದವರಾಗಿದ್ದು, ಇವರು ಮೊದಲೇ ರೌಡಿ ಶೀಟರ್‌ಗಳು ಕೂಡಾ ಆಗಿದ್ದಾರೆ. ಇಂತಹ ಸಮಾಜ ವಿದ್ರೋಹಿ ಕೆಲಸಗಳಲ್ಲಿ ನಿರತರಾಗಿರುವ ಆರೋಪಿಗಳ ಮೇಲೆ ಸಣ್ಣ ಸೆಕ್ಷನ್ ದಾಖಲಿಸುವ ಮೂಲಕ ಅವರು ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆಗೊಳ್ಳುವಂತೆ ಮಾಡಿರುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ಸಮಯ ನ್ಯೂಸ್‌ನ ಇರ್ಷಾದ್ ಮಾತನಾಡಿ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದ್ದು, ಪೊಲೀಸ್ ಅಧಿಕಾರಿಗಳು ಮುಂದೆ ನಿಂತು ಸಮಾಜ ದ್ರೋಹಿ ಶಕ್ತಿಗಳಿಗೆ ಬೆಂಬಲ ನೀಡುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನಕ್ಕೆ ಹೊರಟಿದ್ದಾರೆ ಎಂದು ಆರೋಪಿಸಿದರು.
ವಾರ್ತಾ ಭಾರತಿಯ ಪತ್ರಕರ್ತ ಶಿಬಿ ಧರ್ಮಸ್ಥಳ ಮಾತನಾಡಿ ಸಮಾಜಕ್ಕೆ ರಕ್ಷಣೆ ನೀಡಬೇಕಾದ ಕೆಲ ಪೊಲೀಸರೇ ಸಮಾಜಘಾತುಕ ಶಕ್ತಿಗಳಿಗೆ ರಕ್ಷಣೆ ನೀಡಲು ಹೊರಟಿರುವುದರಿಂದ ಸಮಾಜದ ಹುಳುಕುಗಳನ್ನು ಹೊರಜಗತ್ತಿಗೆ ಅನಾವರಣಗೊಳಿಸುವ ಪತ್ರಕರ್ತರಿಗೆ ರಕ್ಷಣೆಯಿಲ್ಲದಂತಾಗಿದೆ. ಆದ್ದರಿಂದ ಇಂತಹ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಪ್ರಕರಣದ ಕುರಿತು ಎಸ್ಪಿ ಮಟ್ಟದಲ್ಲಿ ನಿಷ್ಪಾಕ್ಷಪಾತ ತನಿಖೆ ನಡೆಸಿ, ವ್ಯಕ್ತಿ ಸ್ವಾತಂತ್ರ್ಯ ಉಳಿಸುವ ಕೆಲಸ ಪೊಲೀಸರಿಂದಾಗಲಿ ಎಂದರು.
ಜಯಕನ್ನಡಮ್ಮ ಪತ್ರಿಕೆಯ ಸಂಪಾದಕ ದೇವಿಪ್ರಸಾದ್ ಮಾತನಾಡಿ ಗೂಂಡಾಗಳು ಹಾಗೂ ಪೊಲೀಸರ ಒಟ್ಟಿಗೆ ರಾಜ್ಯಬಾರ ಮಾಡಲು ಖಂಡಿತಾ ಅವಕಾಶ ನೀಡಲ್ಲ. ಪತ್ರಕರ್ತರಿಗೆ ಇಂತಹ ಸ್ಥಿತಿಯಾದರೆ ನ್ಯಾಯಕೇಳಿ ಬರುವ ಜನಸಾಮಾನ್ಯನ ಗತಿಯೇನು. ಅಕ್ರಮ ಚಟುವಟಿಕೆಗಳಿಗೆ ಪೊಲೀಸರು ಬೆಂಬಲ ನೀಡಿದರೆ ನಾಗರಿಕರನ್ನು ಒಗ್ಗೂಡಿಸಿಕೊಂಡು ಠಾಣೆಗೆ ಮುತ್ತಿಗೆ ಹಾಕಬೇಕಾದಿತೆಂದು ಎಚ್ಚರಿಸಿದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಮಾತನಾಡಿ ಈ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವವರೆಗೆ ನಿರಂತರ ಹೋರಾಟ ನಡೆಸಲಾಗುವುದು. ಇದು ಗೃಹ ಇಲಾಖೆಯ ಲೋಪವಾಗಿದ್ದು, ವಿಧಾನ ಸಭಾ ಅಧಿವೇಶನದಲ್ಲೂ ಈ ಪ್ರಕರಣದ ಕುರಿತಾಗಿ ಚರ್ಚೆ ಮಾಡಲು ಶಾಸಕರಲ್ಲಿ ಮನವಿ ಮಾಡಲಾಗುವುದು ಎಂದರು. ಪತ್ರಕರ್ತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಸಿಪಿಐಎಂ ಮುಖಂಡ ಶೇಖರ್ ಲಾಲ, ಟಿವಿ9 ವರದಿಗಾರ ರಾಜೇಶ್ ಮತ್ತಿತರರು ಮಾತನಾಡಿದರು.
12:15ರ ಸುಮಾರಿಗೆ ಪುತ್ತೂರು ಉಪವಿಭಾಗದ ಎಎಸ್ಪಿ ಹೃಷ್ಯಂತ್ ಅವರು ಸ್ಥಳಕ್ಕಾಗಮಿಸಿ, ಪತ್ರಕರ್ತರ ಮನವಿ ಆಲಿಸಿದರು. ಅಲ್ಲದೇ, ಧರಣಿ ಸ್ಥಳದಲ್ಲಿದ್ದ ಹಲ್ಲೆಗೊಳಗಾದ ಪತ್ರಕರ್ತ ಆಸೀಪ್ ಅವರಲ್ಲೂ ಹೇಳಿಕೆ ಪಡೆದುಕೊಂಡರು. ಬಳಿಕ ಮಾತನಾಡಿದ ಎಎಸ್ಪಿ ಹೃಷ್ಯಂತ್, ಸಮಾಜ ಘಾತುಕ ಶಕ್ತಿಗಳಿಂದ ಯಾವುದೇ ಕಾರಣಕ್ಕೂ ಪತ್ರಕರ್ತರಿಗೆ ತೊಂದರೆಯಾಗಲು ಬಿಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡಲು ಪೊಲೀಸ್ ಇಲಾಖೆ ಬದ್ಧವಿದೆ. ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುವ ಪೊಲೀಸರ ಮೇಲೆಯೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆಸೀಫ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಅವರು ನೀಡಿದ ದೂರಿನಂತೆ ಸೆಕ್ಷನ್ ದಾಖಲಿಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವರು ಬೇಕಾದರೆ ಇನ್ನೊಂದು ದೂರು ಹೇಳಿಕೆಯನ್ನು ಠಾಣೆಗೆ ನೀಡಿದ್ದಲ್ಲಿ ಮತ್ತೊಮ್ಮೆ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರಲ್ಲದೆ, ಠಾಣಾಧಿಕಾರಿಯವರ ವಿರುದ್ಧ ಕೇಳಿ ಬಂದ ಆರೋಪವನ್ನು ಪರಿಶೀಲಿಸಿ, ಅವರ ತಪ್ಪಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಪತ್ರಕರ್ತರು ಧರಣಿಯನ್ನು ಹಿಂಪಡೆದುಕೊಂಡರು.
ಪ್ರತಿಭಟನೆಯಲ್ಲಿ ವಿವಿಧ ಮಾಧ್ಯಮಗಳ ವರದಿಗಾರರಾದ ಯೋಗೀಶ್ ಕುತ್ತಾರ್, ಚೇತನ್‌ರಾಜ್, ರಾಜೇಶ್ ಕೆ., ಕಿರಣ್, ಅಚ್ಚುಶ್ರೀ, ಲಕ್ಷ್ಮೀಮಚ್ಚಿನ, ಗಿರೀಶ್, ಮುಹಮ್ಮದಲಿ ವಿಟ್ಲ, ನಿಶಾಂತ್ ಬಿಲ್ಲಂಪದವು, ಕಡಬ ವಲಯ ಮಾಧ್ಯಮ ವರದಿಗಾರರ ಬಳಗದ ಅಧ್ಯಕ್ಷ ಬಾಲಕೃಷ್ಣ ಕೊಲ, ದಿನೇಶ್ ಕಡಬ, ಕಬೀರ್, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ, ಗೋಪಾಲಕೃಷ್ಣ ಕುಂಟಿನಿ, ಕಿಶನ್, ನಾಗರಾಜ್ ಕಡಬ, ಸಂತೋಷ್ ಶಾಂತಿನಗರ, ಸಿದ್ದೀಕ್ ನೀರಾಜೆ, ಉದಯ ಕುಮಾರ್, ದೀಪಕ್ ಉಪ್ಪಿನಂಗಡಿ, ಮೇಘಾ ಪಾಲೆತ್ತಡಿ, ಲೊಕೇಶ್ ಬನ್ನೂರು, ಸರ್ವೇಶ್ ಭಟ್, ನಝೀರ್ ಕೊಲ, ಸೇರಿದಂತೆ ದಯಾ ಕುಕ್ಕಾಜೆ, ಜ್ಯೋತಿ ಪ್ರಕಾಶ್ ಪುಣಚ, ವೆಂಕಟೇಶ್ ಬಂಟ್ವಾಳ, ವಿಷ್ಣುಗುಪ್ತ ಪುಣಚ, ವಿಲ್ಫ್ರೆಡ್, ಮೋಹನ್ ಕುತ್ತಾರ್ ಸೇರಿದಂತೆ ಮಂಗಳೂರು, ವಿಟ್ಲ, ಬಂಟ್ವಾಳ, ಬೆಳ್ತಂಗಡಿ, ಕಡಬ, ಪುತ್ತೂರು ಪತ್ರಕರ್ತರ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಬೆಳಗ್ಗೆ 10 ಗಂಟೆಗೆ ಉಪ್ಪಿನಂಗಡಿ ಠಾಣೆಯ ಬಳಿ ಜಮಾಯಿಸಿದ ಮಂಗಳೂರು, ವಿಟ್ಲ, ಬಂಟ್ವಾಳ, ಬೆಳ್ತಂಗಡಿ, ಕಡಬ, ಪುತ್ತೂರು ಪತ್ರಕರ್ತರ ಸಂಘಗಳ ಪ್ರತಿನಿಧಿಗಳು 10:30ರ ಸುಮಾರಿಗೆ ಠಾಣೆಯ ಮುಂಭಾಗಕ್ಕೆ ಆಗಮಿಸಿ ಧರಣಿ ನಡೆಸಿದರು. ಮಧ್ಯಾಹ್ನ ಸುಮಾರು ಒಂದು ಗಂಟೆಯ ತನಕ ಧರಣಿ ನಡೆಯಿತು.
ಪೊಲೀಸರ ಬ್ಯಾಂಕ್ ಖಾತೆ ತನಿಖೆಯಾಗಲಿ: ಸುಖೇಶ್
ಉಪ್ಪಿನಂಗಡಿ ಠಾಣಾಧಿಕಾರಿ ಅವರು ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಂದ 60 ಸಾವಿರ ರೂಪಾಯಿ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಆದ್ದರಿಂದ ಇಲ್ಲಿನ ಪೊಲೀಸರ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಫೋನ್ ಕರೆಗಳ ಬಗ್ಗೆ ತನಿಖೆ ನಡೆಯಲಿ ಎಂದು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸುಖೇಶ್ ಒತ್ತಾಯಿಸಿದರು.