×
Ad

ಮಂಗಳೂರು : ಪ್ರೊ.ಪಿ.ಸಿ.ಎಂ.ಕುಂಞಿ ನಿಧನ

Update: 2016-02-29 21:55 IST

ಮಂಗಳೂರು, ಫೆ.29: ಯೆನೆಪೊಯ ವಿವಿಯ ಶೈಕ್ಷಣಿಕ ಹಾಗೂ ಆಡಳಿತ ವಿಭಾಗದ ನಿರ್ದೇಶಕ, ಶೈಕ್ಷಣಿಕ ಹಾಗೂ ಸಾಮಾಜಿಕ ರಂಗದ ಧುರೀಣ ಪ್ರೊ. ಪಿ.ಸಿ.ಎಂ. ಕುಂಞಿ(75) ಇಂದು ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ಅವರನ್ನು ರವಿವಾರದಂದು ಸಂಜೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಸ್ಥಿತಿಗಂಭೀರವಾಗಿತ್ತು. ಕಾಸರಗೋಡುವಿನ ಮೊಗ್ರಾಲ್ ಪುತ್ತೂರಿನಲ್ಲಿ ಜನಿಸಿದ ಪಿ.ಸಿ.ಎಂ. ಕುಂಞಿ ಶೈಕ್ಷಣಿಕ ರಂಗದಲ್ಲಿ ಅಪಾರ ಸೇವೆಗೈದ ಅಪರೂಪದ ಸಾಧಕರಾಗಿದ್ದಾರೆ. ಬಿ.ಎಸ್ಸಿ(ಇಂಜಿನಿಯರಿಂಗ್) ಪದವಿ ಎಂ.ಟೆಕ್ ಸ್ನಾತಕೋತ್ತರ ಪದವಿಗಳನ್ನು ಪಡೆದ ಅವರು ಕೆಆರ್‌ಇಸಿ (ಈಗಿನ ಎನ್‌ಐಟಿಕೆ)ಯಲ್ಲಿ ಪ್ರಾಧ್ಯಾಪಕರಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ಪಿ.ಸಿ.ಎಂ. ಕುಂಞಿ ಬದ್ರಿಯಾ ವಿದ್ಯಾಸಂಸ್ಥೆಯ ಸ್ಥಾಪಕ ಸದಸ್ಯರಾಗಿ ಅದರ ಅಭಿವೃದ್ದಿಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದರು. ಪ್ರಸ್ತುತ ಅವರು ಯೆನೆಪೊಯ ವಿಶ್ವವಿದ್ಯಾನಿಲಯದ ನಿರ್ದೇಶಕ, ಬದ್ರಿಯಾ ವಿದ್ಯಾಸಂಸ್ಥೆಯ ಸಂಚಾಲಕ ಮತ್ತು ಪಿ.ಸಿ. ಗ್ರೂಪ್ ಚೇರ್‌ಮೆನ್, ಇಸ್ಲಾಮಿಕ್ ಅಕಾಡಮಿ ಆಫ್ ಎಜುಕೇಶನ್‌ನ ಚೇರ್‌ಮೆನ್, ಎಸ್ಸಾ ಇಂಗ್ಲಿಷ್ ಮಿಡಿಯಂ ಸ್ಕೂಲ್‌ನ ಖಜಾಂಚಿ, ಮಂಗಳೂರು ಇಸ್ಲಾಮಿಕ್ ಟ್ರಸ್ಟ್‌ನ ಕಾರ್ಯನಿರ್ವಾಹಕ ಕಾರ್ಯದರ್ಶಿ, ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಕಾರ್ಯನಿರ್ವಾಹಕ ಕಾರ್ಯದರ್ಶಿ, ಮೊಗ್ರಾಲ್ ಚಾಲಿಯಂಗೋಡು ಜವ್ನತ್ ಅಧ್ಯಕ್ಷ, ಇಸ್ಲಾಮಿಕ್ ಸ್ಟಡಿ ಸೆಂಟರ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಎನ್‌ಐಟಿಕೆಯ ಸೆನೆಟ್ ಮೆಂಬರ್ ಆಗಿದ್ದ ಅವರು ಕಳೆದ ವರ್ಷ ಅದರಿಂದ ನಿವೃತ್ತಿಯಾಗಿದ್ದರು. ಫೆಲೋ ಆಫ್ ಇನ್ಸಿಟ್ಯೂಟ್ ಆಫ್ ಇಂಜಿನಿಯರ್ಸ್‌ ಮತ್ತು ಮೆಂಬರ್ ಆಫ್ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್‌ನ ಸದಸ್ಯರು ಆಗಿದ್ದರು.

1991ರಲ್ಲಿ ಯೆನೆಪೊಯ ಡೆಂಟಲ್ ಕಾಲೇಜು ಆರಂಭವಾದ ನಂತರ ಅವರು ಸಂಸ್ಥೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದರು. ಶಿಕ್ಷಣದಲ್ಲಿ ಸಮನ್ವಯತೆ ಸಾರುವ ದೃಷ್ಟಿಯಲ್ಲಿ ಸಮನ್ವಯ ಸಂಸ್ಥೆಯನ್ನು ಸಮಾನಮನಸ್ಕರೊಂದಿಗೆ ಹುಟ್ಟು ಹಾಕಿ ಅದರ ಮೂಲಕ ಕೋಮುಸೌಹಾರ್ದ ಕಾಪಾಡಲು ಪ್ರಯತ್ನವನ್ನು ಮಾಡಿದ್ದರು.

ಎಪ್ರಿಲ್ 3, 1941ರಂದು ಜನಿಸಿದ ಅವರಿಗೆ 2016 ಎಪ್ರಿಲ್ 3ಕ್ಕೆ 75 ವರ್ಷಗಳು ತುಂಬುತ್ತಿತ್ತು. 75 ವರ್ಷದ ಪ್ರಯುಕ್ತ ಅಮೃತಮಹೋತ್ಸವ ಕಾರ್ಯಕ್ರಮದ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾಸರಗೋಡು ಮತ್ತು ಮಂಗಳೂರಿನಲ್ಲಿ ಕಾರ್ಯಕ್ರಮದ ಮೂಲಕ ಅವರ ಸಾಧನೆಯನ್ನು ತಿಳಿ ಹೇಳುವ ಪ್ರಯತ್ನ ನಡೆಸುತ್ತಿದ್ದು, ಇದರಂಗವಾಗಿ ವಿಶೇಷಸಂಚಿಕೆಯನ್ನು ಸಿದ್ಧಪಡಿಸಲಾಗಿತ್ತು. ಈ ಸಂಚಿಕೆ ಇದೀಗ ಮುದ್ರಣ ಹಂತದಲ್ಲಿದೆ.

ಅವರಿಗೆ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಿತ್ತು.

ಫುಟ್‌ಬಾಲ್ ಕ್ರೀಡಾಪಟುವಾದ ಪಿ.ಸಿ.ಎಂ. ಕುಂಞಿ ಕೇರಳ ರಾಜ್ಯ ಪುಟ್‌ಬಾಲ್ ತಂಡದ ಕ್ರೀಡಾಪಟುವಾಗಿ ವಿದ್ಯಾರ್ಥಿದೆಸೆಯಲ್ಲಿ ಪ್ರತಿಷ್ಠಿತ ಸಂತೋಷ್ ಟ್ರೋಫಿಯನ್ನು ಪಡೆದುಕೊಂಡಿದ್ದರು. ಹಲವು ರಾಜ್ಯಗಳಿಗೆ ಕೇರಳವನ್ನು ಫುಟ್‌ಬಾಲ್ ಕ್ರೀಡೆಯಲ್ಲಿ ಅವರು ಪ್ರತಿನಿಧಿಸಿದ್ದರು. ನಗರದ ಅತ್ತಾವರದ ಕಾಪ್ರಿಗುಡ್ಡದಲ್ಲಿ ಸ್ವಗೃಹದಲ್ಲಿ ವಾಸವಿದ್ದ ಅವರು ಮೂರು ಮಂದಿ ಗಂಡು ಮಕ್ಕಳನ್ನು ಅಗಲಿದ್ದಾರೆ.

ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಕ್ರೀಡಾ ಸಚಿವ ಅಭಯಚಂದ್ರ ಜೈನ್, ಯೆನೆಪೊಯ ವಿವಿ ಕುಲಪತಿ ವೈ. ಅಬ್ದುಲ್ಲಾ ಕುಂಞಿ, ರಾಜೀವ್ ಗಾಂಧಿ ಆರೋಗ್ಯ ವಿವಿ ಸೆನೆಟ್ ಸದಸ್ಯ ಡಾ.ಯು.ಟಿ.ಇಫ್ತಿಕಾರ್, ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್, ದ.ಕ. ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ. ಅಸ್ಲಂ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಎಸ್.ಎಂ.ಆರ್. ರಶೀದ್ ಹಾಜಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಮನ್ಸೂರ್ ಆಝಾದ್ ಹಾರ್ಡ್‌ವೇರ್ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ನಾಳೆ ಅಂತ್ಯಸಂಸ್ಕಾರ: ಮಂಗಳವಾರ ಝುಹರ್ ನಮಾಝ್‌ಬಳಿಕ ಪಂಪ್‌ವೆಲ್‌ನ ತಕ್ವಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿದ ಬಳಿಕ ಕಾಸರಗೋಡಿನ ಮೊಗ್ರಾಲ್‌ಗೆ ತೆಗೆದುಕೊಂಡು ಹೋಗಿ ಅಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಸಾಮಾಜಿಕ, ಶೈಕ್ಷಣಿಕ ರಂಗದ ಅಪರೂಪದ ಸಾಧಕರೊಬ್ಬರನ್ನು ಕಳೆದುಕೊಂಡಿದ್ದೇವೆ. ಅವರ ಜೀವನ ಇಂದಿನ ಯುವಜನರಿಗೆ ಮಾದರಿಯಾಗಿದೆ. ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ.

            -ಯು.ಟಿ.ಖಾದರ್, ಆರೋಗ್ಯ ಸಚಿವರು

ಬದ್ರಿಯಾ ವಿದ್ಯಾಸಂಸ್ಥೆಯ ಅಭಿವೃದ್ಧಿಯಲ್ಲಿ ಪಿಸಿಎಂ ಕುಂಞಿಯವರ ಪಾತ್ರ ಮುಖ್ಯವಾದದ್ದು. ಅವರನ್ನು ಕಳೆದುಕೊಂಡಿರುವುದು ದೊಡ್ಡ ನಷ್ಟ. ಅವರ ಜಾಗವನ್ನು ತುಂಬಲು ಸಾಧ್ಯವಿಲ್ಲ. ಬದ್ರಿಯಾ ವಿದ್ಯಾಸಂಸ್ಥೆ ಪಿಸಿಎಂ ಕುಂಞಿ ನಿಧನಕ್ಕೆ ಸಂತಾಪ ಸೂಚಿಸುತ್ತದೆ.

- ಇಸ್ಮಾಯಿಲ್, ಪ್ರಾಂಶುಪಾಲರು, ಬದ್ರಿಯಾ ವಿದ್ಯಾಸಂಸ್ಥೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News