×
Ad

ಮೂಡುಬಿದಿರೆ ಪುರಸಭೆಯಲ್ಲಿ 25 ಲಕ್ಷ ರೂ ಅವ್ಯವಹಾರ - ಸದಸ್ಯ ಹನೀಫ್ ಆಲಂಗಾರು ಆರೋಪ

Update: 2016-02-29 22:04 IST

ಮೂಡುಬಿದಿರೆ : ಘನತ್ಯಾಜ್ಯ ನಿರ್ವಹಣೆಯ ಟೆಂಡರ್ ಮೊತ್ತದಲ್ಲೇ ಜಂಗಲ್ ಕಟ್ಟಿಂಗ್ ಮೊತ್ತ ಸೇರಿದ್ದರೂ ಅದಕ್ಕೆ ಪುರಸಭೆಯಿಂದ ಪ್ರತ್ಯೇಕವಾಗಿ ಪಾವತಿಸುವ ಮೂಲಕ ಸುಮಾರು 25ಲಕ್ಷ ರೂ ಅವ್ಯವಹಾರ ನಡೆಸಲಾಗಿದೆ ಎಂದು ಪುರಸಭಾ ಸದಸ್ಯ ಹನೀಫ್ ಆಲಂಗಾರು ಆರೋಪಿಸಿದ್ದಾರೆ.

   ಸೋಮವಾರ ಮೂಡುಬಿದಿರೆ ಪುರಸಭೆಯಲ್ಲಿ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ಸಭಾಭವನದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ಬಗ್ಗೆ ಆರೋಪಿಸಿದ ಹನೀಫ್ ಅವರು ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 99ಲಕ್ಷ ರೂಗಳ ಇ. ಟೆಂಡರ್‌ನಲ್ಲಿ ಗುತ್ತಿಗೆ ಪಡೆದವರು ಶೇ. 10ರಷ್ಟು ಇಎಂಡಿ ಇಡಬೇಕು ಎಂದು ಶರ್ತವನ್ನು ಹಾಕಲಾಗಿದೆ. ಸರ್ಕಾರದ ನಿಯಮದಲ್ಲಿರುವುದು ಶೇ 5 ಮಾತ್ರ. ಗುತ್ತಿಗೆದಾರರೊಬ್ಬರು ಸರ್ಕಾರಿ ಶರ್ತವನ್ನು ಪುರಸಭೆಯ ಅಧಿಕಾರಗಳಿಗೆ ತಿಳಿಸಿದ ಬಳಿಕ ಶರ್ತವನ್ನು ತಿದ್ದುಪಡಿ ಮಾಡಿ ಮತ್ತೆ ಟೆಂಡರ್ ಕರೆಯುವ ಮೂಲಕ ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಗುತ್ತಿಗೆದಾರರು ಬರದಂತೆ ತಡೆಯಲಾಗಿದೆ ಎಂದರು.
    
ಇದಕ್ಕೆ ಉತ್ತರಿಸಿದ ಪರಿಸರ ಇಂಜಿನಿಯರ್ ಶಿಲ್ಪಾ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳಲ್ಲಿ ಚರ್ಚಿಸಿಯೇ ಇ ಟೆಂಡರ್‌ನಲ್ಲಿ ಶೇ 10 ಠೇವಣಿ ಮೊತ್ತವನ್ನು ನಮೂದಿಸಲಾಗಿದೆ. ಸರ್ಕಾರಿ ಶರ್ತದಲ್ಲಿ ಶೇ 5 ಇರುವುದು ತನಗೆ ಗೊತ್ತಿರಲಿಲ್ಲ ಎಂದು ಉತ್ತರಿಸಿದಾಗ, ಗುತ್ತಿಗೆದಾರಿಗೆ, ಪುರಸಭಾ ಸದಸ್ಯರಿಗೆ ಈ ಬಗ್ಗೆ ಅರಿವಿದ್ದರೂ ಇದನ್ನು ಅನುಷ್ಠಾನಗಳಿಸುವ ಅಧಿಕಾರಿಗಳಿಗೆ ಅರಿವಿಲ್ಲ ಎಂದರೆ ಹೇಗೆ? ಎಂದು ಹನೀಫ್ ತರಾಟೆಗೆ ತೆಗೆದುಕೊಂಡರು.

ಪುರಸಭಾ ವ್ಯಾಪ್ತಿಯಲ್ಲಿ ಆಶ್ರಯ ಮನೆ ಹಕ್ಕು ಪತ್ರ ನೀಡಿದ್ದರೂ ಆರ್‌ಟಿಸಿ, ಖಾತೆ ನಂಬ್ರ ನೀಡದಿರುವುದರಿಂದ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಲಭಿಸುತ್ತಿಲ್ಲ. ಹೀಗಾಗಿ ಪುರಸಬೆಯಿಂದಲೇ ಫಲಾನುಭವಿಗಳಿಗೆ ಖಾತೆ ನಂಬ್ರ ನೀಡಬೇಕೆಂದು ಮೂಡಾದ ಅದ್ಯಕ್ಷ ಸುರೇಶ್ ಕೋಟ್ಯಾನ್ ಸಲಹೆ ನೀಡಿದ್ದು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಪುರಸಭೆಯಲ್ಲಿ ಕಳಪೆ ಕಾಮಗಾರಿ, ಅವ್ಯವಹಾರದ ಬಗ್ಗೆ ಆಗಾಗ ದೂರುಗಳು ಕೇಳಿ ಬರುತ್ತಿವೆ. ಕಳಪೆ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸದೆ ಬಿಲ್ ಪಾವತಿಸಲಾಗುತ್ತಿದೆ. ಪುರಸಭಾ ಸದಸ್ಯರು ಹಾಗೂ ನಿವೃತ್ತ ಇಂಜಿನಿಯರ್‌ರನ್ನು ಒಳಗೊಂಡ ಪರಿಶೀಲನಾ ಸಮಿತಿಯನ್ನು ರಚಿಸಿ ತಪಾಸಣೆಗೊಳಪಡಿಸಬೇಕು ಎಂದು ಸದಸ್ಯ ಬಾಹುಬಲಿ ಪ್ರಸಾದ್ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News