ಕಲ್ಲಿದ್ದಲು-ಉಕ್ಕು ವಲಯದ 1.8ಮಿಲಿಯ ಉದ್ಯೋಗಿಗಳನ್ನು ಕೈಬಿಡಲು ಚೀನ ಚಿಂತನೆ
ಬೀಜಿಂಗ್, ಫೆ.29: ಕೈಗಾರಿಕೆಗಳಲ್ಲಿ ಸಾಮರ್ಥ್ಯ ಮೀರಿದ ನೇಮಕಾತಿಗಳನ್ನು ಕಡಿತಗೊಳಿಸುವುದಕ್ಕಾಗಿ ಕಲ್ಲಿದ್ದಲು ಹಾಗೂ ಉಕ್ಕು ವಲಯದ 1.8 ಮಿಲಿಯ ಉದ್ಯೋಗಿಗಳನ್ನು ಕೈಬಿಡಲು ತಾನು ನಿರೀಕ್ಷಿಸಿದ್ದೇನೆಂದು ಸೋಮವಾರ ಚೀನ ಹೇಳಿದೆ. ಆದರೆ, ಇದಕ್ಕದು ಯಾವುದೇ ಸಮಯ ಮಿತಿ ನೀಡಿಲ್ಲ.
ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸಗಾರರ ಸಮಸ್ಯೆ ನಿಭಾಯಿಸುವ ಹಾಗೂ ಅಂತಹ ನೂರಾರು ಉದ್ಯೋಗಿಗಳನ್ನು ಕೈಬಿಡುವ ನಿರ್ಧಾರವನ್ನು ಚೀನ ಕೈಗೊಂಡಿದೆ. ‘ರೆಂಬಿ ಉದ್ಯಮಗಳು’ ಎಂದು ಕರೆಯಲಾಗುವ, ಸಂಕಷ್ಟ ವಲಯದ ನಷ್ಟ ಮಾಡುತ್ತಿರುವ ಇಂತಹ ಕೈಗಾರಿಕೆಗಳನ್ನು ಉದ್ಯೋಗ ನಷ್ಟ ತಡೆಯಲು ಪ್ರಯತ್ನಿಸುವ ಮೂಲಕ ಸ್ಥಳೀಯಾಡಳಿತಗಳು ಜೀವಂತವಾಗಿರಿಸಿವೆ.
ಕಲ್ಲಿದ್ದಲು ವಲಯದ 1.3 ಮಿಲಿಯ ಹಾಗೂ ಉಕ್ಕು ವಲಯದ 5ಲಕ್ಷ ಉದ್ಯೋಗಿಗಳು ತಮ್ಮ ಉದ್ಯೋಗ ಕಳೆದುಕೊಳ್ಳಬಹುದೆಂದು ಚೀನದ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಭದ್ರತೆ ಸಚಿವ ಯಿನ್ ವೇಯ್ಮಿನ್ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದ್ದಾರೆ.
ಕುಸಿಯುತ್ತಿರುವ ಆರ್ಥಿಕ ಬೆಳವಣಿಗೆಯ ನಡುವೆ, ಕೈಗಾರಿಕೆಗಳು ಸಾಮರ್ಥ್ಯಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಂಡಿರುವ ಸಮಸ್ಯೆಯನ್ನು ನಿಭಾಯಿಸಲು ಚೀನ ಪ್ರಯತ್ನಿಸುತ್ತಿರುವ ವೇಳೆ, ಸರಕಾರದ ಹಿರಿಯ ಅಧಿಕಾರಿಯೊಬ್ಬರು ಉದ್ಯೋಗ ನಷ್ಟದ ಅಂಕೆ-ಸಂಖ್ಯೆ ನೀಡಿರುವುದು ಇದೇ ಮೊದಲು ಸಲವಾಗಿದೆ.
ಇದು ಒಟ್ಟು 1.8 ಮಿಲಿಯ ಉದ್ಯೋಗಿಗಳಿಗೆ ಪರಿಹಾರ ನೀಡಿಕೆಯನ್ನೊಳಗೊಂಡಿದೆ. ಈ ಕೆಲಸ ಬಹಳ ಕಷ್ಟದ್ದು. ಆದರೆ ತಾವೀಗಲೂ ಭಾರೀ ವಿಶ್ವಾಸದಿಂದಿದ್ದೇವೆಂದು ಯಿನ್ ಹೇಳಿದ್ದಾರೆ.
ನಿರುದ್ಯೋಗಕ್ಕೆ ಕಡಿವಾಣ ಹಾಕುವುದು. ತದನಂತರದ ಯಾವುದೇ ಸಂಭಾವ್ಯ ದಂಗೆಯನ್ನು ತಡೆಯುವುದು ಚೀನ ಸರಕಾರದ ಆದ್ಯತೆಯಾಗಿದೆ.
ಕೈಬಿಡಲಾದ ನೌಕರರಿಗೆ ಪುನರ್ವಸತಿ ಕಲ್ಪಿಸುವುದಕ್ಕಾಗಿ ಚೀನ ಸರಕಾರವು 100 ಬಿಲಿಯನ್ ಯುವಾನ್‌ಗಳನ್ನು (15.27ಬಿಲಿಯನ್ ಡಾಲರ್) ಎರಡು ವರ್ಷಗಳ ಕಾಲ ಮೀಸಲಿರಿಸಲಿದೆಯೆಂದು ಅಧಿಕಾರಿಗಳು ಕಳೆದ ವಾರ ತಿಳಿಸಿದ್ದರು.