×
Ad

ಉ.ಕೊರಿಯದ ಕುರಿತು ಜಪಾನ್-ಚೀನ ಮಾತುಕತೆ

Update: 2016-02-29 23:25 IST

ಟೋಕಿಯೊ, ಫೆ.29: ಇತ್ತೀಚೆಗೆ ಪ್ಯೊಂಗ್ಯಾಂಗ್ ನಡೆಸಿದ ಪರಮಾಣು ಹಾಗೂ ಕ್ಷಿಪಣಿ ಪರೀಕ್ಷೆಗಳ ಹಿನ್ನೆಲೆಯಲ್ಲಿ ಉತ್ತರಕೊರಿಯಕ್ಕೆ ನೀಡಬಹುದಾದ ಸಂಭಾವ್ಯ ಉತ್ತರಗಳ ಬಗ್ಗೆ ಚರ್ಚಿಸಲು ಜಪಾನ್ ಹಾಗೂ ಚೀನಗಳ ಉನ್ನತ ರಾಜತಂತ್ರಜ್ಞರು ಸೋಮವಾರ ಟೋಕಿಯೊದಲ್ಲಿ ಭೇಟಿಯಾಗಿದ್ದಾರೆ.
ಜಪಾನ್‌ನ ವಿದೇಶಾಂಗ ಉಪ ಸಚಿವ ಶಿನ್ಸುಕೆ ಸುಗಿಯಾಮ ತನ್ನ ಚೀನದ ಸೋದ್ಯೋಗಿ ಕ್ಸುವಾನ್‌ಯ್‌ಕಾಂಗ್‌ರನ್ನು ಭೇಟಿಯಾಗಿದ್ದು, ಇದು ಪ್ಯೋಂಗ್ಯಾಂಗ್ ಸರಕಾರ ಜನವರಿ 6ರಂದು ಅಣು ಪರೀಕ್ಷೆ ಹಾಗೂ ಫೆಬ್ರವರಿಯಲ್ಲಿ ಉಪಗ್ರಹವೊಂದನ್ನು ಹಾರಿಸಿದ ಬಳಿಕ ಉಭಯ ದೇಶಗಳ ನಡುವೆ ನಡೆಯುತ್ತಿರುವ ಮೊದಲ ಉನ್ನತ ಮಟ್ಟದ ರಾಜತಂತ್ರಜ್ಞರ ನಡುವಿನ ಮಾತುಕತೆಯಾಗಿದೆಯೆಂದು ಇಎಸ್‌ಇ ವರದಿ ಮಾಡಿದೆ.
ಈ ಕಾರ್ಯಾಚರಣೆಗಳಿಗಾಗಿ ಉತ್ತರ ಕೊರಿಯವನ್ನು ಶಿಕ್ಷಿಸಲು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯರಾಗಿರುವ ಚೀನ ಮತ್ತು ಅಮೆರಿಕ ಕಠಿಣ ನಿಷೇಧದ ಕರಡು ತಯಾರಿಸಲು ಕಳೆದ ವಾರ ಒಪ್ಪಿದ ಬಳಿಕ ಈ ಸಭೆ ನಡೆದಿದೆ.
ಉತ್ತರ ಕೊರಿಯ ಇತ್ತೀಚೆಗೆ ನಡೆಸಿದ ಶಸ್ತ್ರಾಸ್ತ್ರ ಪರೀಕ್ಷೆಯ ಕುರಿತು ಬೀಜಿಂಗ್‌ನೊಂದಿಗೆ ದೂರವಾಣಿಯಲ್ಲಿ ಚರ್ಚಿಸಲು ಸಾಧ್ಯವಿಲ್ಲವೆಂದು ಜಪಾನ್ ತಿಳಿಸಿದ ಕೆಲವೇ ದಿನಗಳಲ್ಲಿ ನಡೆಯುವ ಈ ಸಭೆಯಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು, ಇತರ ಪ್ರಾದೇಶಿಕ ಸಮಸ್ಯೆಗಳನ್ನು ಕೂಡ ಬಗೆಹರಿಸಲಿದ್ದಾರೆ.
ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಿಸಲು ಜಪಾನ್‌ನೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಲು ಇಚ್ಛಿಸಿದ್ದೇನೆಂದು ಕಾಂಗ್ ಈ ಮೊದಲು ಹೇಳಿದ್ದರು. ಸೆಂಕಾಕು ದ್ವೀಪಗಳ ಸಾರ್ವಭೌಮತೆಯ ಸುತ್ತಲಿನ ವಿವಾದದ ಕಾರಣದಿಂದ ಪೂರ್ವ ಏಷ್ಯಾದ ಮಹತ್ವದ ಶಕ್ತಿಗಳ ನಡುವಿನ ಸಂಬಂಧ ಉದ್ವಿಗ್ನವಾಗುಳಿದಿದೆ. ವಿಯೆಟ್ನಾಂ ಮಾಲಕತ್ವ ಘೋಷಿಸಿರುವ ದಕ್ಷಿಣ ಚೀನ ಸಮುದ್ರದ ದ್ವೀಪವೊಂದರಲ್ಲಿ ನೆಲದಿಂದ ಆಕಾಶಕ್ಕೆ ಹಾರುವ ಕ್ಷಿಪಣಿಯೊಂದನ್ನು ಇತ್ತೀಚೆಗೆ ನಿಯೋಜಿಸಿರುವ ಬೀಜಿಂಗನ್ನು ಟೋಕಿಯೊ ಟೀಕಿಸಿದ ಬಳಿಕ, ಇತ್ತೀಚಿನ ವಾರಗಳಲ್ಲಿ ಅವುಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News