×
Ad

ಒಳಚಡ್ಡಿಯಲ್ಲಿ ಭೂಸೇನಾ ಗುಮಾಸ್ತರ ಪರೀಕ್ಷೆ

Update: 2016-03-01 23:45 IST

ಮುಝಫ್ಫರ್‌ಪುರ, ಮಾ.1: ಅವರು ಪರೀಕ್ಷೆಯೊಂದನ್ನು ಬರೆಯುವುದಕ್ಕಾಗಿ ಬಂದಿದ್ದರು ಬಿಹಾರದ ನೂರಾರು ಯುವಕರಿಗೆ ಮೊದಲು ಅವರ ಬಟ್ಟೆಗಳನ್ನು ಕಳಚುವಂತೆ ಸೂಚಿಸಲಾಯಿತು. ಭೂಸೇನೆಯಲ್ಲಿ ಗುಮಾಸ್ತರ ಹುದ್ದೆಗಳಿಗಾಗಿ ಮುಝಫ್ಫರ್‌ಪುರದಲ್ಲಿ ನಡೆದ ಪರೀಕ್ಷೆಯನ್ನು ಈ ಯುವಕರು ಕೇವಲ ಒಳಚಡ್ಡಿ ಮಾತ್ರ ಧರಿಸಿ ಬರೆದರು.

ಮಾಧ್ಯಮಗಳಾದ್ಯಂತ ಪ್ರಸಾರ ಮಾಡಲಾದ ಚಿತ್ರಗಳಿಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವಾಲಯವು, ಈ ಬಗ್ಗೆ ವಿವರಣೆ ನೀಡುವಂತೆ ಭೂಸೇನಾ ದಂಡನಾಯಕ ದಲ್ಬೀರ್‌ಸಿಂಗ್ ಸುಹಾಗ್‌ರಿಗೆ ಆದೇಶಿಸಿದೆಯೆಂದು ವರದಿಯಾಗಿದೆ. ಬಿಹಾರದ ಹೈಕೋರ್ಟ್ ಕೂಡ ರಕ್ಷಣಾ ಸಚಿವಾಲಯದಿಂದ ವಿವರಣೆ ಕೇಳಿದೆ.
ರವಿವಾರ, ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ 1,100 ಮಂದಿ ಅಭ್ಯರ್ಥಿಗಳಿಗೆ ಬಟ್ಟೆ ಕಳಚುವಂತೆ ಸೂಚನೆ ನೀಡಿದಾಗ ಅವರು ಆಘಾತಗೊಂಡರು. ಆದರೆ, ಅವರು ಏನು ಮಾಡಬೇಕೋ ಅದನ್ನು ಮಾಡಿದರು. ಉದ್ಯೋಗಾಕಾಂಕ್ಷಿಗಳು ತಮ್ಮ ಅಂಗಿ ಮತ್ತು ಚಡ್ಡಿಗಳನ್ನು ಬಿಚ್ಚಿದ ಬಳಿಕ ಬನಿಯನ್‌ಗಳನ್ನು ತೆಗೆಯುವಂತೆ ಪರೀಕ್ಷಾಧಿಕಾರಿಗಳು ಅವರಿಗೆ ಸೂಚಿಸಿದರು.
ವಂಚನೆಗೆ ಕುಖ್ಯಾತವಾಗಿರುವ ರಾಜ್ಯವೊಂದರಲ್ಲಿ ಪರೀಕ್ಷಾಧಿಕಾರಿಗಳು ಹಾಗೂ ಹೆತ್ತವರ ಸಹಕಾರದಿಂದಲೇ ಭಾರೀ ಅವ್ಯವಹಾರ ನಡೆಯುತ್ತದೆ. ಇಂತಹ ಕಡೆ ಬಟ್ಟೆಗಳಲ್ಲಿ ಕಾಗದದ ಚೂರುಗಳನ್ನು ಅಡಗಿಸಿಕೊಳ್ಳದಂತೆ ತಡೆಯಲು ಇದೇ ಅತ್ಯುತ್ತಮ ಮಾರ್ಗವೆಂದು ಭೂ ಸೇನಾಧಿಕಾರಿಗಳು ನಿರ್ಧರಿಸಿದ್ದರು.
ಆಕ್ರೋಶಕ್ಕೆ ಕಾರಣವಾದ ಈ ನಡೆಯನ್ನು ಸಮರ್ಥಿಸಿರುವ ಭೂ ಸೇನೆಯ ಪ್ರಾದೇಶಿಕ ಕಚೇರಿಯ ನಿರ್ದೇಶಕ, ಕರ್ನಲ್ ವಿ.ಎಸ್. ಗೋಧರ, ಎಲ್ಲ ಅಗತ್ಯ ಮುನ್ನೆಚ್ಚರಿಕೆ ವಹಿಸುವ ಅಧಿಕಾರವನ್ನು ತನಗೆ ನೀಡಲಾಗಿತ್ತು. ಕಳೆದ ವರ್ಷ ಇಬ್ಬರು ಅಭ್ಯರ್ಥಿಗಳು ತಮ್ಮ ಬನಿಯನ್‌ಗಳು ಹಾಗೂ ಒಳ ಉಡುಪುಗಳಲ್ಲಿ ನಕಲು ಚೀಟಿಗಳು ಹಾಗೂ ಮೊಬೈಲ್ ಫೋನ್‌ಗಳನ್ನು ಅಡಗಿಸಿಕೊಂಡಿದ್ದರೆಂದು ಹೇಳಿದ್ದಾರೆ.
ಅಂತಿಮವಾಗಿ ಅಭ್ಯರ್ಥಿಗಳು ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತುಕೊಂಡು ತಮ್ಮ ತೊಡೆಗಳನ್ನೇ ಮೇಜುಗಳಂತೆ ಉಪಯೋಗಿಸಿ ಒಂದು ತಾಸಿನ ಪರೀಕ್ಷೆ ಬರೆದರು. ಕೆಲವರು ತಮಗೆ ಶೀತವಾಗಿದೆ ಹಾಗೂ ಆರಾಮವಾಗಿಲ್ಲವೆಂದು ದೂರಿದರಾದರೂ, ಅವರಿಗೆ ಬೇರೆ ಆಯ್ಕೆ ಇರಲಿಲ್ಲ.
ಹವಾಮಾನ ಆಹ್ಲಾದಕರವಾಗಿತ್ತು. ಅದರಲ್ಲಿ ಅವಮಾನವಾಗುವಂತಹದು ಏನೂ ಇರಲಿಲ್ಲ. ಹೇಗಿದ್ದರೂ ಅವರು ಶಾರೀರಿಕ ಪರೀಕ್ಷೆಗಾಗಿ ಒಳಚಡ್ಡಿಗಳಲ್ಲೇ ಓಡಬೇಕಿತ್ತು ಹಾಗೂ ಇತರ ದೈಹಿಕ ಚಟುವಟಿಕೆಗಳನ್ನು ನಡೆಸಬೇಕಿತ್ತೆಂದು ಕ. ಗೋಧರ ಹೇಳಿದ್ದಾರೆ.
 ಕಳೆದ ವರ್ಷ 10ನೆ ತರಗತಿಯ ಮಕ್ಕಳನ್ನೊಳಗೊಂಡ ಸಾಮೂಹಿಕ ನಕಲಿನ ಚಿತ್ರಗಳು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಸುದ್ದಿ ಮಾಡಿದ್ದವು. ಅಭ್ಯರ್ಥಿಗಳ ಹೆತ್ತವರು, ಸಂಬಂಧಿಕರು ಹಾಗೂ ಇತರರು, ವಿದ್ಯಾರ್ಥಿಗಳಿಗೆ ಕಾಗದದ ಚೀಟಿಗಳನ್ನು ನೀಡಲು ಪರೀಕ್ಷಾ ಕೇಂದ್ರದ ಗೋಡೆಗಳನ್ನೇರುತ್ತಿದ್ದ ಚಿತ್ರಗಳೂ ಅವುಗಳಲ್ಲಿದ್ದವು.
ಜನವರಿಯಲ್ಲಿ ಮಂಡಳಿಯ ಪರೀಕ್ಷೆಗಳಿಗೆ ಮೊದಲು, ನಕಲು ಮಾಡುವಾಗ ಹಿಡಿಯಲಾಗುವ ವಿದ್ಯಾರ್ಥಿಗಳಿಗೆ ರೂ. 20 ಸಾವಿರ ದಂಡ ಹಾಗೂ ಅವರಿಗೆ ನೆರವಾಗುವ ಬಂಧುಗಳಿಗೆ ಕಾರಾಗೃಹವಾಸ ವಿಧಿಸಲಾಗುವುದೆಂದು ಬಿಹಾರ ಘೋಷಿಸಿತ್ತು. ತರಗತಿ ಕೊಠಡಿಗಳಲ್ಲಿ ಸಿಸಿಟಿವಿಗಳ ಅಳವಡಿಕೆ ಹಾಗೂ ಕೆಲವು ಪರೀಕ್ಷಾ ಕೇಂದ್ರಗಳ ನೇರ ಪ್ರಸಾರವನ್ನೂ ಅದು ಆದೇಶಿಸಿತ್ತು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News