×
Ad

ಕನ್ಹಯ್ಯ ಬಗ್ಗೆ ನಮಗೆ ಹೆಮ್ಮೆಯಿದೆ: ಕುಟುಂಬಸ್ಥರು

Update: 2016-03-01 23:47 IST

ಹೊಸದಿಲ್ಲಿ,ಮಾ.1: ದೇಶದ್ರೋಹದ ಆರೋಪದಲ್ಲಿ ಜೈಲಿನಲ್ಲಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರ ಚಿಕ್ಕಪ್ಪ ರಾಜೇಂದ್ರ ಸಿಂಗ್ ಮತ್ತು ಸೋದರ ಮಣಿಕಾಂತ ಕುಮಾರ್ ಅವರು, ಕನ್ಹಯ್ಯಾರನ್ನು ವಿದ್ಯಾರ್ಥಿ ಸಮುದಾಯ ಮತ್ತು ವಿಶ್ವ ಚಿಂತಕರು ಇಷ್ಟೊಂದು ದೊಡ್ಡ ರೀತಿಯಲ್ಲಿ ಬೆಂಬಲಿಸುತ್ತಿರುವುದು ತಮಗೆ ಆತನ ಬಗ್ಗೆ ಹೆಮ್ಮೆಯನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

ಸೋಮವಾರ ರಾತ್ರಿ ವಿವಿಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಿಂಗ್ ‘‘ಇಷ್ಟೊಂದು ಜನರು ಕನ್ಹಯ್ಯೊನನ್ನು ಇಷ್ಟ ಪಡುತ್ತಾರೆ ಮತ್ತು ಅವನು ಜನರಲ್ಲಿ ಇಷ್ಟೊಂದು ಸ್ಫೂರ್ತಿಯನ್ನು ತುಂಬಿದ್ದಾನೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಅವನು ಇಂದು ಜೈಲಿನಲ್ಲಿದ್ದಾನಾದರೂ ನಮಗೆ ಅವನ ಬಗ್ಗೆ ಹೆಮ್ಮೆಯಿದೆ ’’ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆತ್ತಿಕೊಂಡ ಅವರು ‘‘ನಮ್ಮ ಪೂರ್ವಜರು ಸ್ವಾತಂತ್ರ ಹೋರಾಟಗಾರರಾಗಿದ್ದರು.ನಮ್ಮ ಗ್ರಾಮದ ಜನರು ಬ್ರಿಟಿಷರ ವಿರುದ್ಧ ಸಂಘರ್ಷ ನಡೆಸಿದ್ದರು. ಇಂದು ಅದೇ ಗ್ರಾಮದ ಹುಡುಗ ತನ್ನ ಧ್ವನಿಯನ್ನೆತ್ತಿದ್ದಕ್ಕಾಗಿ ಅವನನ್ನು ಭಯೋತ್ಪಾದಕನೆಂದು ಕರೆಯಲಾಗುತ್ತಿದೆ. ತನ್ನನ್ನು ‘‘ಚಾಯ್‌ವಾಲಾ’’ಎಂದು ಕರೆದುಕೊಳ್ಳುವ ಮೋದಿಯವರು ರೈತನೋರ್ವನ ಮಗನನ್ನು ಗುರಿಯಾಗಿಸಿಕೊಂಡಿರುವ ಈ ಸಂದರ್ಭದಲ್ಲಿ ಮಾತನ್ನೇ ಆಡುತ್ತಿಲ್ಲ ಎಂದು ಟೀಕಿಸಿದರು.
ತಿಹಾರ್ ಜೈಲಿನಲ್ಲಿರುವ ಕನ್ಹಯ್ಯರನ್ನು ಭೇಟಿಯಾಗಲೆಂದು ಬಂದಿದ್ದ ಅವರು ತಮ್ಮ ಹೋರಾಟವನ್ನು ಮುಂದುವರಿಸುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು. ಇದು ಕೇವಲ ಜೆಎನ್‌ಯುಗಾಗಿ ಹೋರಾಟವಲ್ಲ,ಇದು ಇಡೀ ದೇಶಕ್ಕಾಗಿ ಹೋರಾಟ ಎಂದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News