8 ತಿಂಗಳಲ್ಲಿ 54 ಗ್ರಾಹಕರ ಕೇಸ್‌ಗಳು ಇತ್ಯರ್ಥ: ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ಅಧ್ಯಕ್ಷೆ ಶೋಭಾ
ಉಡುಪಿ, ಮಾ.1: ಎಂಟು ತಿಂಗಳಿಂದ ಈವರೆಗೆ ಉಡುಪಿ ಜಿಲ್ಲೆಯ ಗ್ರಾಹಕ ನ್ಯಾಯಾಲಯದಲ್ಲಿ 152 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಅದರಲ್ಲಿ ಸುಮಾರು 54 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ತೀರ್ಪುಗಳು ಗ್ರಾಹಕರ ಪರವಾಗಿದ್ದವು ಎಂದು ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ಅಧ್ಯಕ್ಷೆ ಶೋಭಾ ಪಿ. ತಿಳಿಸಿದ್ದಾರೆ.
ಉಡುಪಿ ಬಳಕೆದಾರರ ವೇದಿಕೆಯ ವತಿಯಿಂದ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದಲ್ಲಿ ಸೋಮವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಆಯೋಗಕ್ಕೆ ಹೋಗಿರುವ 27 ಪ್ರಕರಣಗಳು ಮರು ಆದೇಶಕ್ಕಾಗಿ ಮತ್ತೆ ಜಿಲ್ಲಾ ನ್ಯಾಯಾಲಯಕ್ಕೆ ಬಂದಿವೆ. 8-9 ಅಮೂಲ್ ಜಾರಿ ಪ್ರಕರಣಗಳ ಬಗ್ಗೆ ತೀರ್ಪು ನೀಡ ಲಾಗಿದ್ದು, ಅದರಲ್ಲಿ ಗ್ರಾಹಕರಿಗೆ ಸಿಗಬೇಕಾದ ಪರಿಹಾ ದ ಹಣ ಸಂದಾಯವಾಗಿದೆ ಎಂದು ಅವರು ಹೇಳಿದರು.
ನ್ಯಾಯಾಲಯಕ್ಕೆ ದೂರು ಸಲ್ಲಿಸಿದ ಮೂರು ತಿಂಗಳೊಳಗೆ ಅದರ ತೀರ್ಪನ್ನು ನೀಡಲು ಕಾನೂನು ಹೇಳುತ್ತದೆ. ದೂರಿನಲ್ಲಿ ಸರಿಯಾದ ವಿಳಾಸ ನೀಡದಿದ್ದರೆ ಎದುರುದಾರರಿಗೆ ನೋಟಿಸ್ ಜಾರಿ ಮಾಡಲು ಕಷ್ಟವಾಗುತ್ತದೆ. ಇದರಿಂದ ತೀರ್ಪು ನೀಡಲು ವಿಳಂಬವಾಗುತ್ತದೆ. ಪರಿಹಾರ ಮೊತ್ತ 1 ಲಕ್ಷ ರೂ. ಆಗಿದ್ದರೆ 100 ರೂ. ನ್ಯಾಯಾಲಯ ಶುಲ್ಕ ಪಾವತಿಸಬೇಕು. ಅದೇ ರೀತಿ 5 ಲಕ್ಷ ರೂ.ಗೆ 200ರೂ., 10 ಲಕ್ಷ ರೂ.ಗೆ 400 ರೂ., 20 ಲಕ್ಷ ರೂ.ಗೆ 500 ರೂ., 1 ಕೋಟಿ ರೂ.ವರೆಗಿನ ಪರಿಹಾರಕ್ಕೆ 5,000 ರೂ.ಶುಲ್ಕ ಪಾವತಿಸಬೇಕಾಗಿದೆ ಎಂದವರು ಮಾಹಿತಿ ನೀಡಿದರು.
ಗ್ರಾಹಕ ನ್ಯಾಯಾಲಯದ ಸದಸ್ಯೆ ಶಾರದಾ ಉಪಸ್ಥಿತ ರಿದ್ದರು. ವೇದಿಕೆಯ ಸಂಚಾಲಕ ದಾಮೋದರ್ ಐತಾಳ್ ಸ್ವಾಗತಿಸಿದರು. ವಿಶ್ವಸ್ಥ ಎಚ್.ಶಾಂತರಾಜ ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಪಿ. ಕೊಡಂಚ ಕಾರ್ಯಕ್ರಮ ನಿರೂಪಿಸಿದರು.