ಪುಕ್ಕಟೆ ವಡಾ-ಪಾವ್ ನೀಡದ್ದಕ್ಕಾಗಿ ಅಂಗಡಿಯವನಿಗೆ ಥಳಿಸಿದ್ದ ಶಿವಸೇನಾ ಸದಸ್ಯ ಪಕ್ಷದಿಂದ ವಜಾ
ಮುಂಬೈ,ಮಾ.1: ಪುಕ್ಕಟೆ ವಾ-ಪಾವ್ ನೀಡಲು ನಿರಾಕರಿಸಿದ್ದಕ್ಕಾಗಿ ಅಂಗಡಿಯೊಂದರ ಸಹಾಯಕನನ್ನು ಥಳಿಸಿದ್ದ ಶಿವಸೇನೆಯ ಯುವಘಟಕದ ಪದಾಧಿಕಾರಿಯೋರ್ವನನ್ನು ಪೊಲೀಸರು ಬಂಧಿಸಿದ್ದು, ಪಕ್ಷವು ಆತನನ್ನು ಉಚ್ಚಾಟಿಸಿದೆ.
ಶುಕ್ರವಾರ ವಿಲೆಪಾರ್ಲೆಯಲ್ಲಿ ಈ ಘಟನೆ ನಡೆದಿತ್ತು. ಆರೋಪಿ ಸುನಿಲ್ ಮಹಾದಿಕ್ ಎಂಬಾತ ಡಿ.ಜೆ.ರಸ್ತೆಯಲ್ಲಿರುವ ತೃಪ್ತಿ ಸ್ವೀಟ್ಸ್ ಆ್ಯಂಡ್ ಫರ್ಸಾಣ ಮಾರ್ಟ್‌ನಿಂದ ಉಚಿತವಾಗಿ 100 ವಡಾ-ಪಾವ್‌ಗಳನ್ನು ತರುವಂತೆ ವ್ಯಕ್ತಿಯೋರ್ವನನ್ನು ಕಳುಹಿಸಿದ್ದ. ಅಷ್ಟೊಂದು ವಡಾ-ಪಾವ್ ಇಲ್ಲ ಎಂದು ಕೆಲಸದಾಳು ಚೇತನ್ ಗೆವೆರಿಯಾ(28) ಹೇಳಿದಾಗ ಆ ವ್ಯಕ್ತಿ ಅಲ್ಲಿಂದ ಬರಿಗೈಯಲ್ಲಿ ಮರಳಿದ್ದ.
ಮರುದಿನ ಚೇತನ್‌ಗೆ ಕರೆ ಮಾಡಿದ್ದ ಸುನೀಲ್ ಆತನನ್ನು ಅವಾಚ್ಯವಾಗಿ ಬೈದು, ತಾನು ಕಳುಹಿಸುವ ವ್ಯಕ್ತಿಗೆ 100 ವಡಾ-ಪಾವ್ ನೀಡುವಂತೆ ತಾಕೀತು ಮಾಡಿದ್ದ. ಈ ಬಗ್ಗೆ ಮಾಲಕರೊಂದಿಗೆ ಮಾತನಾಡುವಂತೆ ಚೇತನ್ ಹೇಳಿದ್ದ. ಇದರಿಂದ ಕುಪಿತಗೊಂಡ ಸುನೀಲ್ ಅಂಗಡಿಗೆ ತೆರಳಿ ಚೇತನ್‌ಗೆ ದೊಣ್ಣೆಯಿಂದ ಥಳಿಸಿದ್ದ. ಅಲ್ಲದೆ ಕೊಲ್ಲುವುದಾಗಿ ಜೀವ ಬೆದರಿಕೆಯನ್ನೂ ಒಡ್ಡಿದ್ದ.
ಈ ಘಟನೆ ಅಂಗಡಿಯಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದ್ದು,ದೃಶ್ಯಾವಳಿಯನ್ನು ಕೆಲವು ಸ್ಥಳೀಯ ಸುದ್ದಿ ಚಾನೆಲ್‌ಗಳು ಪ್ರಸಾರವನ್ನೂ ಮಾಡಿದ್ದವು. ಮಹಾದಿಕ್‌ನನ್ನು ಬಂಧಿಸಲಾಗಿದ್ದು,ನ್ಯಾಯಾಲಯವು ಆತನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.
ನೆರೆಯ ಥಾಣೆಯಲ್ಲಿ ಮೂರು ದಿನಗಳ ಹಿಂದೆಯಷ್ಟೇ ಶಿವಸೇನಾ ಕಾರ್ಯಕರ್ತನೋರ್ವ ಮಹಿಳಾ ಸಂಚಾರ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ದು, ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.