ನಾಪತ್ತೆಯಾಗಿದ್ದ ಬೇಕಲದ ವಿದ್ಯಾರ್ಥಿಗಳು ಮಡಗಾಂವ್‌ನಲ್ಲಿ ಪತ್ತೆ
ಉಡುಪಿ, ಮಾ.1: ಕಾಸರಗೋಡು ಜಿಲ್ಲೆ ಉದುಮ ತಾಲೂಕಿನ ಬೇಕಲದ ಇಬ್ಬರು 14ರ ಹರೆಯದ ಶಾಲಾ ವಿದ್ಯಾರ್ಥಿಗಳು ಫೆ.28ರಂದು ಮಡಗಾಂವ್ ರೈಲು ನಿಲ್ದಾಣದ ರೈಲ್ವೆ ರೆಸ್ಟೋರೆಂಟ್ ಬಳಿ ಪೊಲೀಸರಿಗೆ ಸಿಕ್ಕಿದ್ದು, ಇದೀಗ ಅವರನ್ನು ಸುರಕ್ಷಿತವಾಗಿ ಅವರ ಹೆತ್ತವರಿಗೆ ಒಪ್ಪಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟನೆಯಲ್ಲಿ ತಿಳಿಸಿದೆ.
ಸಲ್ಮಾನ್ ಫಾರಿಸ್ ಹಾಗೂ ಅಬ್ದುಲ್ ಬಾಸಿತ್ ಎಂಬ 14ರ ಹರೆಯದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದಿದ್ದ ಕಾರಣ ಹೆತ್ತವರು ಬೈದಿದ್ದು, ಇದೇ ಕಾರಣಕ್ಕಾಗಿ ಇಬ್ಬರೂ ಮನೆಯಿಂದ ಓಡಿಹೋಗಲು ನಿರ್ಧರಿಸಿ ಕೊಂಕಣ ರೈಲಿನಲ್ಲಿ ಮಡಗಾಂವ್‌ಗೆ ಬಂದಿದ್ದರು. ಫೆ.28ರಂದು ಇವರಿಬ್ಬರೂ ಮಡಗಾಂವ್ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರಂ ನಂ.1ರಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದಾಗ ಪೊಲೀಸ್ ಕಾನ್‌ಸ್ಟೇಬಲ್ ಡಿ.ಮಾನಸಿಂಗ್‌ರ ಕಣ್ಣಿಗೆ ಬಿದ್ದಿದ್ದರು. ಅವರ ಬಳಿ ಟಿಕೆಟ್ ಇಲ್ಲದ ಕಾರಣ ಮಡಗಾಂವ್‌ನ ಆರ್‌ಪಿಎಫ್‌ಗೆ ಕರೆತಂದು ವಿಚಾರಿಸಿದಾಗ ವೈಯಕ್ತಿಕ ಕಾರಣಕ್ಕಾಗಿ ಮನೆಯಿಂದ ಹೇಳದೆ ಬಂದಿರುವುದಾಗಿ ಒಪ್ಪಿಕೊಂಡರು. ಬಳಿಕ ಅವರಿಂದ ಹೆತ್ತವರ ವಿಳಾಸ ಪಡೆದು ಅವರಿಗೆ ಮಾಹಿತಿ ನೀಡಲಾಯಿತು.
ಸೋಮವಾರ ಬೆಳಗ್ಗೆ ಮಡಗಾಂವ್‌ಗೆ ಬಂದ ಇಬ್ಬರು ಮಕ್ಕಳ ಹೆತ್ತವರು ಆರ್‌ಪಿಎಫ್ ಕಚೇರಿಯಲ್ಲಿ ತಮ್ಮ ಮಕ್ಕಳನ್ನು ಗುರುತಿಸಿ ಅವರನ್ನು ವಶಕ್ಕೆ ಪಡೆದು ಕೊಂಕಣ ರೈಲ್ವೆ ಹಾಗೂ ಆರ್‌ಪಿಎಫ್‌ಗೆ ಕೃತಜ್ಞತೆ ಸಲ್ಲಿಸಿ ಊರಿಗೆ ಕರೆತಂದರು.