×
Ad

ಮನಪಾ: ಬಜೆಟ್ ಪೂರ್ವ ಅಭಿಪ್ರಾಯ ಸಂಗ್ರಹಕ್ಕೆ ನೀರಸ ಪ್ರತಿಕ್ರಿಯೆ

Update: 2016-03-01 20:53 IST

ಮಂಗಳೂರು, ಮಾ. 1: ಇಲ್ಲಿನ ಮಹಾನಗರ ಪಾಲಿಕೆಯ 2016-17ನೆ ಸಾಲಿನ ಬಜೆಟ್ ಪೂರ್ವ ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕೆ ಕೇವಲ ಬೆರಳೆಣಿಕೆಯ ಮಂದಿ ಭಾಗವಹಿಸುವ ಮೂಲಕ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಂಜೆ 4 ಗಂಟೆಗೆ ಆರಂಭವಾದ ಸಭೆಯಲ್ಲಿ ವೇದಿಕೆಯಲ್ಲಿ ಆಯುಕ್ತ ಡಾ. ಎಚ್.ಎನ್. ಗೋಪಲಾಕೃಷ್ಣ, ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್ ಹಾಗೂ ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಸಾಲಿಯಾನ್, ಹರಿನಾಥ್, ಶಶಿಧರ್ ಹೆಗ್ಡೆ, ಕೇಶವ ಮರೋಳಿ, ದೀಪಕ್ ಪೂಜಾರಿ ಉಪಸ್ಥಿತರಿದ್ದರು.
ಸಭೆಯಲ್ಲಿ ಕೆಲ ಅಧಿಕಾರಿಗಳು ಹಾಗೂ ಬೆರಳೆಣಿಕೆಯ ಸಾರ್ವಜನಿಕರು ಮಾತ್ರವೇ ಭಾಗವಹಿಸಿದ್ದು, ಅವರಲ್ಲೂ ಕೆಲವರು ಮನಪಾ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಬಗ್ಗೆ ದೂರುಗಳನ್ನು ಹೇಳುವ ಮೂಲಕ ಸಭೆ ಕುಂದುಕೊರತೆಗಳ ಸಭೆಯಾಗಿ ಮಾರ್ಪಟ್ಟಿತ್ತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಆಯುಕ್ತ ಡಾ. ಗೋಪಾಲ ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 2016-17ನೆ ಸಾಲಿಗೆ 400 ಕೋಟಿ ರೂ.ಗಳ ಬಜೆಟ್ ರೂಪಿಸುವ ಗುರಿ ಹೊಂದಲಾಗಿದೆ. ಇದರಲ್ಲಿ 153 ಕೋಟಿ ರೂ.ಗಳನ್ನು ಆಸ್ತಿ ತೆರಿಗೆ, ನೀರಿನ ಶುಲ್ಕ ಮೊದಲಾದ ಆದಾಯಗಳಿಂದ ಸಂಗ್ರಹಿಸುವುದು ಹಾಗೂ 250 ಕೋಟಿ ರೂ.ಗಳನ್ನು ಸರಕಾರದ ದೇಣಿಗೆಯಿಂದ ಪಡೆಯಲು ಬಜೆಟ್ ೂಪಿಸಲಾಗುತ್ತಿದೆ ಎಂದು ಹೇಳಿದರು.

ಸಾರ್ವಜನಿಕರ ಪರವಾಗಿ ಮಾತನಾಡಿದ ಗೋಪಾಲಕೃಷ್ಣ ಭಟ್, ನಗರದ ಅಲ್ಲಲ್ಲಿ ಸಣ್ಣ ಹೋರ್ಡಿಂಗ್‌ಗಳನ್ನು ಹಾಕಲು ಅವಕಾಶ ನೀಡಿ ಅದಕ್ಕೆ ತೆರಿಗೆ ವಿಧಿಸುವುದು. ಕಾಂಕ್ರೀಟ್ ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ಅವಕಾಶ ನೀಡಿ ಶುಲ್ಕ ಸಂಗ್ರಹಿಸುವುದು, ಬಸ್ಸು ನಿಲ್ದಾಣ, ಫುಟ್‌ಪಾತ್‌ಗಳನ್ನು ವ್ಯವಸ್ಥಿತಗೊಳಿಸುವ ಕಾರ್ಯವನ್ನು ಮಾಡುವ ಮೂಲಕ ಆದಾಯವನ್ನು ಸಂಗ್ರಹಿಸಬಹುದು ಎಂದರು.

ರಾಜೇಂದ್ರ ಕುಮಾರ್ ಎಂಬವರು ಮಾತನಾಡುತ್ತಾ, ಬಸ್ಸು ನಿಲ್ದಾಣಗಳನ್ನು ಮಾಡಿ, ಜಾಹೀರಾತು ಹಾಕಲು ಅವಕಾಶ ನೀಡುವ ಮೂಲಕ ಆದಾಯ ಗಳಿಸಲು ಸಾಧ್ಯವಾಗಲಿದೆ ಎಂದರು. ನಗರದ ಮುಖ್ಯ ರಸ್ತೆಗಳಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿರುವಂತೆಯೇ, ಒಳ ರಸ್ತೆಗಳಲ್ಲಿ ಟ್ಯೂಬ್‌ಲೈಟ್‌ಗಳ ಬದಲು ಎಲ್‌ಇಡಿ ಬಲ್ಬ್‌ಗಳ ಮೂಲಕ ವಿದ್ಯುತ್ ಉಳಿತಾಯ ಮಾಡಿ ಮನಪಾದ ವಿದ್ಯುತ್ ವೆಚ್ಚವನ್ನು ಕಡಿಮೆಮಾಡಲು ಸಾಧ್ಯವಿದೆ ಎಂದು ರೋಹನ್ ಶಿರಿ ಅಭಿಪ್ರಾಯಿಸಿದರು.

ವಾರ್ಡ್ ಕಮಿಟಿ ರಚನೆ ಮಾಡಬೇಕು. ುಟ್‌ಪಾತ್ ನಿರ್ಮಾಣ ಮಾಡಬೇಕು. ಮರಗಳನ್ನು ಕಡಿಯುವಾಗ ಸಸಿಗಳನ್ನು ನೆಡಬೇಕು. ಗೂಡಂಗಡಿಗಳಿಗೆ ಲೈಸೆನ್ಸ್ ನೀಡಬೇಕು. ಪಾರ್ಕಿಂಗ್‌ಗೆ ಮೊದಲ ಆದ್ಯತೆ,ಸ ಪಾರ್ಕಿಂಗ್ ಸ್ಥಳಗಳನ್ನು ಅತಿಕ್ರಮಿಸಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂಬ ಕ್ರಮಗಳ ಬಗ್ಗೆ ಆಗ್ರಹವೂ ಸಭೆಯಲ್ಲಿ ವ್ಯಕ್ತವಾಯಿತು.

ಮನಪಾ ವ್ಯಾಪ್ತಿಯಲ್ಲಿ ಬಹು ಮಹಡಿ ಕಟ್ಟಡಗಳು, ಫ್ಲಾಟ್‌ಗಳು ಹೆಚ್ಚುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅವಕಾಶವೇ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ತಾರಸಿ ಗಾರ್ಡನ್‌ಗೆ ಉತ್ತೇಜನ ನೀಡಿ ತೆರಿಗೆಯಲ್ಲಿ ವಿನಾಯಿತಿ ನೀಡುವ ಮೂಲಕ ಪ್ರೋತ್ಸಾಹಿಸಬಹುದು. ನಗರದಲ್ಲಿ ಫ್ಲೆಕ್ಸ್‌ಗಳು ಹೆಚ್ಚುತ್ತಿರುವುದರಿಂದ ಪ್ಲಾಸ್ಟಿಕ್ ಫ್ಲೆಕ್ಸ್‌ಗಳಿಗೆ ದಿನದ ಆಧಾರದಲ್ಲಿ ಶುಲ್ಕ ವಿಧಿಸುವುದು ಹಾಗೂ ಕಾರ್ಯಕ್ರಮದ ನಿಗದಿತ ಅವಧಿಯ ಬಳಿಕ ಸಂಬಂಧಪಟ್ಟ ಫ್ಲೆಕ್ಸ್, ಜಾಹೀರಾತುಗಳನ್ನು ತೆರವುಗೊಳಿಸುವ ಕಾರ್ಯ ನಡೆಸಬೇಕು. ಡಿಕಂಪೋಸ್ಟ್ ಮಾಡುವ ಫ್ಲೆಕ್ಸ್‌ಗಳಿಗೆ ರಿಯಾಯಿತಿ ನೀಡುವ ಮೂಲಕ ಪರಿಸರ ಸಂರಕ್ಷಣೆಗೂ ಪ್ರೋತ್ಸಾಹ ನೀಡಬಹುದು ಎಂಬ ಸಲಹೆಗಳು ಪತ್ರಕರ್ತ ಪ್ರತಿನಿಧಿಗಳಿಂದ ವ್ಯಕ್ತವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News