ಮಂಗಳೂರು,ಮಾ.1:ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ
ಮಂಗಳೂರು,ಮಾ.1:ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ ಮತ್ತು ವಿಶ್ವ ವಿದ್ಯಾನಿಲಯ ಕಾಲೇಜು, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಭವನದಲ್ಲಿ ಇತ್ತೀಚೆಗೆ ಅಂತರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆಯ ಅಂಗವಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಮತ್ತು ನ್ಯಾಯಾಲಯಗಳಲ್ಲಿ ಕನ್ನಡದ ಬಳಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ. ಬಿ. ಮಾತೃ ಭಾಷೆ ಮುಖಾಂತರ ರಾಜ್ಯದ ಮತ್ತು ದೇಶದ ಸಂಸ್ಕೃತಿ ಹಾಗೂ ಕಲೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈ ಬಗ್ಗೆ ಮಾತೃ ಭಾಷಾ ಪ್ರೇಮವನ್ನು ಬೆಳೆಸಿಕೊಂಡು ಅದರ ಬೆಳವಣಿಗೆಗೆ ಪೂರಕವಾಗಿ ಕಾಯರ್ರ್ಕ್ರಮ ಆಯೋಜಿಸುವುದು ಬಹಳ ಮುಖ್ಯ ಮತ್ತು ಕೆಳ ಹಂತದ ನ್ಯಾಯಾಲಯಗಳಲ್ಲಿ ಕನ್ನಡ ಬಳಸಬೇಕೆಂಬ ನಿರ್ದೇಶನಗಳು ಇದ್ದರೂ ಇಚ್ಫಾ ಶಕ್ತಿಯ ಕೊರತೆಯಿಂದ ಅದು ಕಾರ್ಯಗತವಾಗುತ್ತಿಲ್ಲ, ವಕೀಲರು ಮತ್ತು ನ್ಯಾಯಾಧೀಶರು ಮನಸ್ಸು ಮಾಡಿದರೆ ಮಾತೃ ಭಾಷೆಯಲ್ಲಿ ವ್ಯವಹರಿಸಬಹುದೆಂದುಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವದ್ಯಾನಿಲಯ ಕಾಲೇಜು, ಮಂಗಳೂರುನ ಪ್ರಾಂಶುಪಾಲ ಡಾ. ಉದಯಕುಮಾರ್ ಎಂ.ಎ. ಮಾತನಾಡಿ ಮಕ್ಕಳು ಮಾತೃ ಭಾಷೆಯನ್ನು ಪ್ರೀತಿಸಿ ಬೆಳೆಸಬೇಕು ಮತ್ತು ಮಾತೃ ಭಾಷೆ ಎಲ್ಲಾ ಆಡಳಿತಾತ್ಮಕ ವಿಷಯಗಳಲ್ಲಿ ಬಳಕೆಯಾದರೆ ಸಾಮಾನ್ಯ ಜನರಿಗೆ ಉಪಯೋಗವಾಗುತ್ತದೆಂದು ಹೇಳಿದರು.