ಕಾಂಗ್ರೆಸ್ ಪಕ್ಷ ಮನಪಾ ವ್ಯಾಪ್ತಿಯಲ್ಲಿ ಉಲ್ಭಣಿಸುತ್ತಿರುವ ಕಸದ ಸಮಸ್ಯೆ ಸುಧೀರ್ ಶೆಟ್ಟಿ ಕಣ್ಣೂರು ಆರೋಪಿಸಿದ್ದಾರೆ.

Update: 2016-03-01 17:28 GMT

ಮಂಗಳೂರು, ಮಾ. 1: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಮನಪಾ ವ್ಯಾಪ್ತಿಯಲ್ಲಿ ಉಲ್ಭಣಿಸುತ್ತಿರುವ ಕಸದ ಸಮಸ್ಯೆ ಪರಿಹರಿಸಲು ಗಮನ ನೀಡುತ್ತಿಲ್ಲ ಎಂದು ಮಂಗಳೂರು ಪಾಲಿಕೆ ಪ್ರತಿಪಕ್ಷ ನಾಯಕ ಸುಧೀರ್ ಶೆಟ್ಟಿ ಕಣ್ಣೂರು ಆರೋಪಿಸಿದ್ದಾರೆ.
ಮನೆ ಮನೆಗಳಿಂದ ಕಸ ಸಂಗ್ರಹಣೆಯು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿಲ್ಲ. ಶೇ.60ರಷ್ಟು ಮನೆಗಳಿಂದ ಕಸ ಸಂಗ್ರಹ ನಡೆಯುತ್ತಿದ್ದು, ಉಳಿದ ಮನೆಗಳ ಕಸ-ತ್ಯಾಜ್ಯ ಈ ಹಿಂದೆ ಇದ್ದ ಕಸದ ತೊಟ್ಟಿಯ ಜಾಗದಲ್ಲಿ ರಾಶಿ ಬೀಳುತ್ತಿದೆ. ಆದರೆ, ಮನಪಾ ಶೇ.100ರಷ್ಟು ಘನತ್ಯಾಜ್ಯ ವಿಲೇವಾರಿ ಕರವನ್ನು ಪಡೆದುಕೊಂಡು ಜನಸಾಮಾನ್ಯರಿಗೆ ಅನ್ಯಾಯ ಮಾಡುತ್ತಿದೆ. ಟೆಂಡರ್ ನಿಯಮದ ಪ್ರಕಾರ ಗುತ್ತಿಗೆ ವಹಿಸಿಕೊಂಡವರು ನಗರದ ವಾಣಿಜ್ಯ ಸಂಕೀರ್ಣಗಳಿಂದ ಕಸ ಸಂಗ್ರಹ ಮಾಡಬೇಕು. ಆದರೆ ಗುತ್ತಿಗೆದಾರರು ಹೊಟೇಲ್, ಬಾರು, ರೆಸ್ಟೋರೆಂಟ್‌ಗಳಿಂದ ಕಸ ಸಂಗ್ರಹಕ್ಕೆ ಹೆಚ್ಚುವರಿಯಾಗಿ 5 ಸಾವಿರದಿಂದ 10 ಸಾವಿರದವರೆಗೆ ಹಣವನ್ನು ಅನಧಿಕೃತವಾಗಿ ವಸೂಲಿ ಮಾಡುತ್ತಿದ್ದಾರೆ. ಕಸ ಸಂಗ್ರಹಣೆಗೆ ನೀಡುವ ಮೊತ್ತವನ್ನು ಸಂಗ್ರಹವಾಗುವ ಕಸದ ತೂಕದ ಮೇಲೆ ನಿಗದಿ ಮಾಡಲಾಗುತ್ತದೆ. ಹೀಗಾಗಿ ಕಸದ ಸಂಗ್ರಹಗಾರರು ತೂಕ ಹೆಚ್ಚಿಸಲು ಕಲ್ಲು ಮಣ್ಣನ್ನು ಸೇರಿಸುತ್ತಿದ್ದಾರೆ. ಡಂಪಿಂಗ್ ಯಾರ್ಡ್‌ನಲ್ಲಿ ದೂರದವರೆಗೆ ದುರ್ವಾಸನೆ ಮತ್ತು ಕಸದ ರಾಶಿಗೆ ಬೆಂಕಿ ಬೀಳುವುದು ಸಾಮಾನ್ಯವಾಗಿದೆ. ಕಸ ವಿಲೇವಾರಿಯೊಂದಿಗೆ ರಸ್ತೆಗಳ ಹಾಗೂ ಚರಂಡಿಗಳ ಸ್ವಚ್ಚತೆ ಬಗ್ಗೆಯೂ ನಿಗಾವಹಿಸಬೇಕಾದದ್ದು ಟೆಂಡರ್‌ದಾರರು. ಆದರೆ, ಇದು ಕೂಡ ಪರಿಣಾಮಕಾರಿ ರೀತಿಯಲ್ಲಿ ನಡೆಯುತ್ತಿಲ್ಲ. ಇಂತಹ ಸಮಸ್ಯೆಗಳು ಇತ್ಯರ್ಥವಾಗದಿದ್ದರೆ ಜನಹಿತಕ್ಕಾಗಿ ಪ್ರತಿಭಟನೆ ನಡೆಸಬೇಕಾಗಬಹುದು ಎಂದು ಅವರು ಮನಪಾ ಮೇಯರ್ ಜೆಸಿಂತ ವಿಜಯ ಆಲ್ಪ್ರೆಡ್ ಅವರಿಗೆ ನೀಡಿದ ಮನವಿಯಲ್ಲಿ ಸುಧೀರ್ ಶೆಟ್ಟಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News