ಪರಧರ್ಮವನ್ನು ಅವಹೇಳನ: ಶಿಕ್ಷಕಿಯ ವಿರುದ್ಧ ಕ್ರಮಕ್ಕೆ ಸಿಎಫ್‌ಐ ಮನವಿ
ಮಂಗಳೂರು,ಮಾ.1:ತಾಲೂಕಿನ ಫೆರ್ಮಾಯಿಪದವು ಮಲ್ಲೂರುನಲ್ಲಿರುವ ಸೈಂಟ್ ಆಂಥೋನಿ ಆಂಗ್ಲ ಪ್ರಾಥಮಿಕ ಶಾಲೆಯ ಕಂಪ್ಯೂಟರ್ ಶಿಕ್ಷಕಿಯಾದ ರೇಶ್ಮ ಎಂಬವರು ಅನ್ಯಧರ್ಮಿಯ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮೂಡಬಿದ್ರೆ ವಲಯ ಸಮಿತಿಯ ನೇತೃತ್ವದಲ್ಲಿ ಮಂಗಳೂರು ತಾಲೂಕು ಶಿಕ್ಷಣಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಕಂಪ್ಯೂಟರ್ ಶಿಕ್ಷಕಿ ರೇಶ್ಮಾ 7ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ನಿಮಗೆ ದೇವರಿಲ್ಲ, ದೇವರಿದ್ದರೆ ಏಸುಕ್ರಿಸ್ತ ಮಾತ್ರ. ನೀವು ಅವರನ್ನು ಪೂಜಿಸಿದರೆ ನಿಮಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಮತ್ತು ನೀವು ಅವರ ಅನುಯಾಯಿಗಳಾಬೇಕು ಎಂದು ಹೇಳುವ ಮೂಲಕ ಅನ್ಯಧರ್ಮೀಯ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಧಾರ್ಮಿಕ ಸೌಹಾರ್ದತೆಯನ್ನು ಕಲಿಸಬೇಕಾದ ಶಿಕ್ಷಕಿಯೇ ಧಾರ್ಮಿಕ ಸಾಮರಸ್ಯವನ್ನು ಕದಡಿಸುವಂತಹ ಕೆಲಸವನ್ನು ಮಾಡಿದ್ದಾರೆ. ಸದ್ರಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿರುವ ಈಕೆಯು ತಾನು ಈ ಮೊದಲು ಕೆಲಸ ನಿರ್ವಹಿಸುತ್ತಿದ್ದ ಸೈಂಟ್ ಥೋಮಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ರೀತಿ ತನ್ನ ಸ್ವ ಧರ್ಮವನ್ನು ಪ್ರಚಾರ ಪಡಿಸುವ ಪ್ರವೃತ್ತಿಯನ್ನು ನಡೆಸಿರುವಂತಹ ಆರೋಪಗಳಿವೆ, ಮಾತ್ರವಲ್ಲದೆ ಈ ಮೊದಲು ಸದ್ರಿ ಶಾಲೆಯ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಬೆಲ್ಟ್ ನಲ್ಲಿ ಕ್ರೈಸ್ತ ಧರ್ಮವನ್ನು ಪ್ರಚಾರಪಡಿಸುವ ಮುದ್ರೆಯನ್ನು ಅಂಟಿಸಿದ್ದರು. ಶುಕ್ರವಾರದಂದು ವಿದ್ಯಾರ್ಥಿಗಳಿಗೆ ಪ್ರಾರ್ಥನೆಗೆ ಹೋಗುವುದನ್ನು ನಿಷೇಧಿಸಿದ್ದರು. ಈ ರೀತಿ ಹಲವು ವಿವಾದಗಳು ಈ ವಿದ್ಯಾ ಸಂಸ್ಥೆಯಲ್ಲಿ ನಡೆಯುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಹೆತ್ತವರು ಆತಂಕವನ್ನು ವ್ಯಕತಿಪಡಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಸಿಎಫ್‌ಐ ಜಿಲ್ಲಾಧ್ಯಕ್ಷರಾದ ಇರ್ಷಾದ್ ಬಜ್ಪೆ, ಜಿಲ್ಲಾ ಕಾರ್ಯದರ್ಶಿ ನಿಝಾಮುದ್ದೀನ್, ವಲಯಾಧ್ಯಕ್ಷರಾದ ಮುಕ್ಸಿತ್ ಮತ್ತು ವಲಯ ಸಮಿತಿ ಸದಸ್ಯರಾದ ವಸೀಮ್ ಉಪಸ್ಥಿತರಿದ್ದರು.
ಶಾಲೆಯಲ್ಲಿ ಕ್ರೈಸ್ತ ಧರ್ಮಭೋಧನೆಗೆ ಅವಕಾಶ ನೀಡಿಲ್ಲ, ಪ್ರಕರಣದ ವಿಚಾರಣೆ ನಡೆದಿದೆ:ಶಿಕ್ಷಣ ಸಂಸ್ಥೆಯ ಸ್ಪಷ್ಟನೆ
ಶಾಲಾ ಶಿಕ್ಷಕಿ ರೇಶ್ಮಾ ಶಿಕ್ಷಣ ಸಂಸ್ಥೆಯ ನಿಯಾಮವಳಿಯಂತೆ ಕಟ್ಟುನಿಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಸ್ವಧರ್ಮ ಪ್ರಚಾರ ಮಾಡಿರುವ ಘಟನೆ ನಡೆದ ತಕ್ಷಣವೆ ವಿದ್ಯಾರ್ಥಿಗಳು, ಶಿಕ್ಷಕರು ,ಹೆತ್ತವರು ಮತ್ತು ಪಂಚಾಯತ್ ಅಧ್ಯಕ್ಷರೊಂದಿಗೆ ಸಭೆ ನಡೆಸಿ ವಿವಾದವನ್ನು ಬಗೆಹರಿಸಲಾಗಿದೆ. ಈ ಬಗ್ಗೆ ಶಾಲಾ ಶಿಕ್ಷಕಿಯೂ ಕ್ಷಮಾಪಣೆಯನ್ನು ಕೇಳಿದ್ದಾರೆ. ಅವರಿಗೂ ಕೂಡ ಈ ರೀತಿ ಮುಂದೆ ಮಾಡದಂತೆ ಸೂಚನೆಯನ್ನು ನೀಡಲಾಗಿದೆ. ಆದರೆ ಆ ನಂತರದಲ್ಲಿ ಈ ಬಗ್ಗೆ ವಾಟ್ಸಪ್‌ನಲ್ಲಿ ಅಪಪ್ರಚಾರ ನಡೆದಿದ್ದು ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಸಂದೇಶದಲ್ಲಿ ಸತ್ಯಾಂಶವಿಲ್ಲ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಧರ್ಮದ ಬಗ್ಗೆ ಭೋಧನೆ ಮಾಡುತ್ತಿಲ್ಲ. ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದ್ದೇವೆ. ಶಿಕ್ಷಣಾಧಿಕಾರಿಗಳಿಗೆ ಈಗಾಗಲೆ ಲಿಖಿತ ದೂರು ಸಲ್ಲಿಕೆಯಾಗಿರುವುದರಿಂದ ಶಿಕ್ಷಣಾಧಿಕಾರಿಗಳು ಸೂಕ್ತ ತನಿಖೆ ಮಾಡಿ ಕ್ರಮ ಕೈಗೊಳ್ಳಲಿ. ಈ ಶೈಕ್ಷಣಿಕ ವರ್ಷದ ಕೊನೆಯ ಭಾಗದಲ್ಲಿರುವುದರಿಂದ ಶಿಕ್ಷಕಿಯ ಮೇಲೆ ತಕ್ಷಣ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಬಂದರೆ ಅಗತ್ಯವಾಗಿ ಕ್ರಮ ಕೈಗೊಳ್ಳುತ್ತೇವೆ.
-ಫ್ರಾನ್ಸಿಸ್ ಕುಟಿನೋ, ಸಂಚಾಲಕರು, ಸೈಂಟ್ ಆಂಥೋನಿ ಆಂಗ್ಲ ಪ್ರಾಥಮಿಕ ಶಾಲೆ.