ಸಂಸದ ಹೆಗಡೆಯಿಂದ ಕೋಮು ಹಿಂಸೆಗೆ ಪ್ರಚೋದನೆ; ಪಿಎಫ್‌ಐ ಪ್ರತಿಭಟನೆ
ಭಟ್ಕಳ: ಇತ್ತಿಚೆಗೆ ಶಿರಸಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಕೆನರ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ ಇಸ್ಲಾಂ ಧರ್ಮದ ಕುರಿತಂತೆ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿ ಹಿಂಸೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಆರೋಪಿಸಿ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಭಟ್ಕಳ ಶಾಖೆಯು ಮಂಗಳವಾರ ಪ್ರತಿಭಟನೆ ಹಮ್ಮಿಕೊಂಡಿದ್ದು ಹೆಗಡೆ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರಗಿಸಬೇಕೆಂದು ರಾಜ್ಯಪಾಲರಿಗೆ ಮನವಿ ಅರ್ಪಿಸಿದ್ದಾರೆ.
ದೇಶದ ವೈವಿದ್ಯತೆಯಲ್ಲಿ ಏಕೆತೆಯನ್ನು ಕಾಪಾಡಿಕೊಂಡು ಎಲ್ಲಾ ಜಾತಿ, ಮತ, ಧರ್ಮದವರನ್ನು ಸಮಾನವಾಗಿ ಕಾಣಬೇಕಗಿದ್ದ ಜನಪ್ರತಿನಿಧಿಯೊಬ್ಬ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದು ಶಾಂತಿಯನ್ನು ಪಾಲಿಸುವ ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಾ ಕೋಮು ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದು ಕೂಡಲೇ ಸಂಸದರನ್ನು ಬಂಧಿಸುವುಂತೆ ಪಿ.ಎಫ್.ಐ ಆಗ್ರಹಿಸಿದೆ.
ಜಗತ್ತಿನಲ್ಲಿ ಶಾಂತಿಯನ್ನು ಸಾರಿದ ಇಸ್ಲಾಂ ಧರ್ಮದ ಬಗ್ಗೆ ಅಪಮಾನಕಾರಿಯಾದ ಹೇಳಿಕೆ ನೀಡುತ್ತಿರುವುದು ಸಂಘಪರಿವಾರ ಫ್ಯಾಸಿಸ್ಟ್ ಚಿಂತನೆಯ ಭಾಗವಾಗಿದೆ. ಇದರಿಂದಾಗಿ ಮುಸ್ಲಿಮ ಸಮುದಾಯದ ಬಗೆಗಿನ ಬಿಜೆಪಿ ಯ ನಿಲುವು ಮತ್ತೊಮ್ಮೆ ಸಾಬೀತಾಗಿದೆ. ಮುಂದಿನ ೧೫ ದಿನಗಳೊಳಗೆ ಅನಂತ್ ಕುಮಾರ ಮೇಲೆ ಕಾನೂನು ಕ್ರಮ ಜರಗಿಸದಿದ್ದಲ್ಲಿ ಪಿ.ಎಫ್.ಐ. ಉತ್ತರಕನ್ನಡ ಜಿಲ್ಲಾದ್ಯಂತ ತೀವ್ರ ಹೋರಾಟ ನಡೆಸುತ್ತಿದೆ ಎಂದು ಮನವಿಯಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಪಿ.ಎಫ್.ಐ. ಕುಂದಾಪುರ ಅಧ್ಯಕ್ಷ ಮುಹಮ್ಮದ್ ಮುಅಝ್ಝಮ್, ಉಡುಪಿ ಜಿಲ್ಲಾ ಕಾರ್ಯದರ್ಶಿ ಆಲಂ ಬ್ರಹ್ಮಾವರ್, ಉತ್ತರಕನ್ನಡ ಜಿಲ್ಲಾ ವಿಭಾಗ ಕಾರ್ಯದರ್ಶಿ ಸಿರಾಜುದ್ದೀನ್, ಮುಹಮ್ಮದ್ ಅಲ್ತಾಫ್, ಮಖ್ಬೂಲ್, ಗನಿ, ಮತ್ತಿತರರು ಉಪಸ್ಥಿತರಿದ್ದರು.