ಕೊಣಾಜೆ: ಮುಡಿಪುವಿನಲ್ಲಿ ಕುರ್ನಾಡು ಕ್ಷೇತ್ರ ಮತದಾರರಿಗೆ ಅಭಿನಂದನಾ ಸಭೆ
ಕೊಣಾಜೆ: ಕಳದ ಬಾರಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ ಅಭಿವೃದ್ಧಿ ಪರ ಕೆಲಸ ನಡೆಸದ ಕಾರಣ ಆ ಪಕ್ಷದ ಮುಖಂಡರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಿ ಮತ ಯಾಚಿಸಿತು. ಆದರೆ ಮತದಾರರು ಬಿಜೆಪಿಯನ್ನು ಸೋಲಿಸುವ ಮೂಲಕ ಎಲ್ಲಾ ಅಪಪ್ರಚಾರಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಮೇಲೆ ಇಟ್ಟಿರುವ ನಂಬಿಕೆಯನ್ನು ಚುನಾಯಿತ ಪ್ರತಿನಿಧಿಗಳು ಉಳಿಸುವ ಮೂಲಕ ಮುಖಂಡರು ಹಾಗೂ ಕಾರ್ಯಕರ್ತರ ಸ್ವಾಭಿಮಾನ ಹೆಚ್ಚಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಕುರ್ನಾಡ್ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಹಿನ್ನೆಲೆಯಲ್ಲಿ ಮಂಗಳವಾರ ಮುಡಿಪುವಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾರರ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಅಮೆರಿಕಾದಲ್ಲೂ ಇಲ್ಲದಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರ ಬಗ್ಗೆ ಚರ್ಚಿಸುವ ಬದಲು ಪ್ರತಿಪಕ್ಷಗಳು ಮುಖ್ಯಮಂತ್ರಿಯವರ ವಾಚ್ ವಿಚಾರ ಚರ್ಚಿಸಿ ಕಾಲಹರಣ ಮಾಡುತ್ತಿದ್ದು ಆ ಪಕ್ಷಗಳ ಮುಖಂಡರ ಮನೋಭಾವನೆ ತೋರಿಸುತ್ತದೆ ಎಂದು ಕಿಡಿಕಾರಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ವಿದೇಶೀ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣ ತರುತ್ತೇವೆ ಎಂದು ಮುಖಂಡರು ಭರವಸೆ ನೀಡಿದ್ದರು. ಆದರೆ ಈಗ ಕಪ್ಪು ಹಣ ತರುವ ಮೊದಲು ಪ್ರಧಾನಿ ನರೇಂದ್ರ ಮೋದಿಯವರನ್ನು ವಿದೇಶದಿಂದ ಕರೆತನ್ನಿ ಎಂದು ಮತದಾರರು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಖಾದರ್, ಈ ಬಾರಿಯ ಬಜೆಟ್ ಕಳ್ಳರು, ದಂಧೆಕೋರರಿಗೆ ಪೂರಕವಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ ಅಭಿನಂದನಾ ಭಾಷಣ ಮಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ರಶೀದಾ ಬಾನು, ಮಂಜುಳಾ ಮಾಧವ ಮಾವೆ, ಎಂ.ಎಸ್.ಮಹಮ್ಮದ್, ತಾಲೂಕು ಪಂಚಾಯಿತಿ ಸದಸ್ಯರಾದ ಚಂದ್ರಹಾಸ ಕರ್ಕೇರ, ಅಬ್ದುಲ್ ಜಬ್ಬಾರ್ ಬೋಳಿಯಾರ್, ಮಹಮ್ಮದ್ ಮೋನು ಮಲಾರ್, ಸುರೇಖ ಚಂದ್ರಹಾಸ, ಶಶಿಪ್ರಭಾ ಶೆಟ್ಟಿ, ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಹರೇಕಳ, ಕಾರ್ಮಿಕ ಘಟಕದ ಅಧ್ಯಕ್ಷ ಅಬ್ದುಲ್ ನಾಸಿರ್, ಅಂಬ್ಲಮೊಗರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ರಫೀಕ್, ಮನಪಾ ಸದಸ್ಯೆ ಅಪ್ಪಿ, ಮುಖಂಡರಾದ ಟಿ.ಕೆ.ಸುಧೀರ್, ಪ್ರಶಾಂತ ಕಾಜವ, ನಝರ್ ಷಾ ಪಟ್ಟೋರಿ, ಪದ್ಮನಾಭ ನರಿಂಗಾನ, ರಮೇಶ್ ಶೇಣವ, ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೊಂಟೆಪದವು ಸ್ವಾಗತಿಸಿದರು. ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಹಾಗೂ ಬಶೀರ್ ಅಹ್ಮದ್ ಮುಡಿಪು ಕಾರ್ಯಕ್ರಮ ನಿರೂಪಿಸಿದರು.
‘ವಿಧಾನಸಭೆ ಚುನಾವಣೆ ಸಂದರ್ಭ ತಾನು ನೀಡಿದ್ದ ಭರವಸೆಗಳ ಪೈಕಿ ಈಗಾಗಲೇ ಬಹುತೇಕ ಈಡೇರಿಸಲಾಗಿದೆ, ಉಳಿದಿರುವ ರಸ್ತೆ ಅಭಿವೃದ್ಧಿ ಹಾಗೂ ಇತರ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದಲ್ಲಿ ಮುಂದಿನ ಚುನಾವಣೆ ಸಂದರ್ಭ ಆ ಪ್ರದೇಶದಲ್ಲಿ ಮತ ಯಾಚನೆಗೆ ಕಾಲಿಡಲಾರೆ’
ಯು.ಟಿ.ಖಾದರ್, ಆರೋಗ್ಯ ಸಚಿವ