×
Ad

ಹೊಸ್ಮಠ: ಉರುಂಬಿಯಲ್ಲಿ ಕಿರು ಜಲವಿದ್ಯುತ್ ಯೋಜನೆ ಕಾಮಗಾರಿ ಮತ್ತೆ ಆರಂಭ

Update: 2016-03-02 19:45 IST

ಕಡಬ, ಮಾ.2. ಪುತ್ತೂರು ತಾಲೂಕಿನ ಪೆರಾಬೆ ಗ್ರಾಮದ ಉರುಂಬಿ ಎಂಬಲ್ಲಿ ಅನಧಿಕೃತವಾಗಿ ಕುಮಾರಧಾರ ನದಿಗೆ ಅಣೆಕಟ್ಟು ನಿರ್ಮಿಸಿ ಕಿರುಜಲವಿದ್ಯುತ್ ಯೋಜನೆಯ ಕಾಮಗಾರಿ ಕೈಗೆತ್ತಿಕೊಂಡಿರುವ ಕುಕ್ಕೆ ಹೈಡಲ್ ಪವರ್ ಪ್ರಾಜೆಕ್ಟ್ ಕಂಪೆನಿಯವರು ಇತ್ತೀಚೆಗೆ ಕಾವಗಾರಿ ಆರಂಭಿಸಿ ಕಾನೂನು ಉಲ್ಲಂಘಿಸುತ್ತಿದ್ದು, ಈ ಬಗ್ಗೆ ಕಾನೂನು ಹೋರಾಟಕ್ಕೆ ಸಿದ್ದತೆ ರೂಪಿಸಲಾಗಿದೆ ಎಂದು ಕುಮಾರಧಾರ ಅಣೆಕಟ್ಟು ವಿರೋಧಿ ಹೋರಾಟ ಸಮಿತಿಯು ಎಚ್ಚರಿಸಿದೆ.

    ಕಡಬದಲ್ಲಿ ಬುಧವಾರ ನಡೆದ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಕರುಣಾಕಾರ ಗೋಗಟೆ ಅವರು, ಇತ್ತೀಚೆಗೆ ಜಿ.ಪಂ., ತಾ.ಪಂ ಚುನಾವಣೆ ಸಂದರ್ಭ ನೀತಿ ಸಂಹಿತೆ ಲಾಭವನ್ನು ಗಿಟ್ಟಿಸಿಕೊಂಡು ಸ್ಥಳಿಯ ಅಧಿಕಾರಿಗಳಿಗೆ 2012-13 ಸಾಲಿನಲ್ಲಿ ಕೆಲವು ಇಲಾಖೆಗಳಲ್ಲಿ ಸಿಕ್ಕಿರುವ ಅನುಮತಿ ಪತ್ರವನ್ನು ತೋರಿಸಿ ಅದನ್ನೆ ಅಧಿಕೃತ ಅನುಮತಿ ಎಂದು ನಂಬಿಸಿ ಯೋಜನಾ ಉದ್ದೇಶಿತ ಸ್ಥಳವಾದ ಉರುಂಬಿಯಲ್ಲಿ ಕಾಮಗಾರಿ ಆರಂಭಿಸಿದ್ದರು. ಈ ಬಗ್ಗೆ ಹೋರಾಟ ಸಮಿತಿ ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದಾಗ ಕಂಪೆನಿಯವರಿಗೆ ಯಾವುದೆ ಅನುಮತಿ ದೊರೆತಿಲ್ಲ ಎಂದು ಉತ್ತರಿಸಿದರಲ್ಲದೆ ಎ.ಸಿ ಹಾಗೂ ಕಡಬ ವಿಶೇಷ ತಹಶೀಲ್ದಾರರಿಗೆ ಸೂಚಿಸಿ ಕಾಮಗಾರಿಗೆ ತಡೆ ನೀಡಿದ್ದಾರೆ. ಈ ನಡುವೆ ಹೋರಾಟ ಸಮಿತಿ ನಿಯೋಗ ಬೆಂಗಳೂರಿನ ಇಂಧನ ಇಲಾಖೆ , ಕ್ರೆಡಲ್ ಮತ್ತು ಅರಣ್ಯ ಇಲಾಖೆಗೆ ತೆರಳಿ ವಿಚಾರಿಸಿದಾಗಲೂ ಯಾವುದೇ ರೀತಿಯ ಅನುಮತಿ ನೀಡದಿರುವುದರ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕ್ರೆಡೆಲ್ ಅಧಿಕಾರಗಳ ತಂಡವೊಂದು ಮುಂದಿನ 15 ದಿನದೊಳಗೆ ಕಾವಗಾರಿ ಮಾಡಲಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದೆ. ಈ ಹಿಂದೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸುಳ್ಯ ಶಾಸಕ ಎಸ್ ಅಂಗಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಯೋಜನೆ ಬಗ್ಗೆ ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು ಈ ಯೋಜನೆಯ ಹಂಚಿಕೆ ಮಾತ್ರ ನಡೆದಿದೆ. ಸಂತ್ರಸ್ಥರ ಬಗೆಗಿನ ಕಳಕಳಿ ನನಗಿದೆ. ಅರಣ್ಯ ಹಾಗೂ ಇಂಧನ ಇಲಾಖೆಯ ಜಂಟಿ ಸಮೀಕ್ಷೆ ನಡೆಸಿ ವರದಿ ಪಡೆದ ಬಳಿಕ ಮುಂದುವರಿಯಲಾಗುವುದು ಎಂಬ ಭರವಸೆ ನೀಡಿದ್ದಾರೆ. ಯೋಜನೆ ಅನುಷ್ಠಾನಿಸಲು ಸುಮಾರು 39 ಇಲಾಖೆಗಳ ಹಾಗೂ ಸ್ಥಳಿಯಾಡಳಿತದ ಅನುಮತಿ ಬೇಕು. ಈ ಪೈಕಿ ಕೆಲವೊಂದು ಅನುಮತಿ ಪಡೆದು ಈ ಹಿಂದೆ ಕೆಲಸ ಪ್ರಾರಂಬಿಸಿತ್ತು. ಈ ಹಿಂದೆ ಸ್ಥಳದಲ್ಲಿ ಹೋರಾಟ ಸಮಿತಿ ಪ್ರತಿಭಟನೆ ಹಮ್ಮಿಕೊಂಡಿರುವುದರಿಂದ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸಿದ್ದರು. ಕಂಪೆನಿಗೆ ನೀಡುವ ಅನುಮತಿ ಬಗ್ಗೆ ಮಹತ್ವದ ತೀಮಾಣ ಕೈಗೊಳ್ಳುವುದಿದ್ದರೆ ಹೋರಾಟ ಸಮಿತಿಯವರಿಗೆ ಮುಂಚಿತವಾಗಿ ತಿಳಿಸಿಯೇ ಮುಂದುವರಿಯುತ್ತೇವೆ ಎಂದು ಭರವಸೆ ನೀಡಿದ್ದರು. ಅಲ್ಲದೆ ಅಂದು ನೀಡಿದ್ದ ತಡೆಯಾಜ್ಞೆ ಊರ್ಜಿತದಲ್ಲಿದೆ. ಆದರೂ ಕಳೆದ ಕೆಲವು ದಿನಗಳ ಹಿಂದೆ ಹಿಟಾಚಿ ಯಂತ್ರದ ಮುಖೇನ ನದಿ ಪಾತ್ರದಲ್ಲಿ ಸಮತಟ್ಟು ಮಾಡುವ ಕಾರ್ಯವನ್ನು ಯೋಜನೆ ಕೈಗೆತ್ತಿಕೊಂಡಿರುವ ಕಂಪೆನಿಯವರು ಮಾಡುತ್ತಿದ್ದಾರೆ ಎಂದು ವಿವರಿಸಿದ ಗೋಗಟೆಯವರು ಅನಧಿಕೃತ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News