ಸಾಯಿ ಗಿರಿಧರ್ ರೈ ಬಂಧನಕ್ಕೆ ಬೆಳ್ಳಾರೆ ವರ್ತಕರ ಸಂಘ ಖಂಡನೆ
ಸುಳ್ಯ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿ ನಿಂದಿಸಿದ ಆರೋಪದಲ್ಲಿ ಬೆಳ್ಳಾರೆಯ ಸಾಯಿ ಗಿರಿಧರ ರೈ ಅವರನ್ನು ಬಂಧಿಸಿದ ಕ್ರಮವನ್ನು ಬೆಳ್ಳಾರೆ ವಾಣಿಜ್ಯ ವರ್ತಕ ಮತ್ತು ಕೈಗಾರಿಕೋದ್ಯಮಿಗಳ ಸಂಘ ಖಂಡಿಸಿದೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ರಾಜೇಶ್ ಶ್ಯಾನುಭೋಗ್ ಬೆಳ್ಳಾರೆಯಲ್ಲಿ ವಿದ್ಯುತ್ ಸಮಸ್ಯೆ ವಿಪರೀತವಾಗಿದೆ. ಫೆ.16ರಂದು ಈ ಕುರಿತಂತೆ ಇಲಾಖಾಧಿಕಾರಿಗಳೊಂದಿಗೆ ಮುಖಾಮುಖಿ ಸಂವಾದ ನಡೆದಿತ್ತು. ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದರು. ಆದರೂ ಸಮಸ್ಯೆ ಬಗೆಹರಿದಿರಲಿಲ್ಲ. ನಮ್ಮ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಸಾಯಿ ಗಿರಿಧರ ರೈಯವರು ಈ ಕುರಿತಂತೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇರಿಸಿದ್ದರು. ಫೆ.27ರಂದು ಪುತ್ತೂರು ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಫೋನ್ ಮಾಡಿದಾಗ ಅವರು ಉಡಾಫೆ ಉತ್ತರ ನೀಡಿ ಸಚಿವರಿಗೇ ಕೇಳಿ ಎಂದಿದ್ದಾರೆ. ಹೀಗಾಗಿ ಸಚಿವರಿಗೆ ಫೋನ್ ಮಾಡಿದ್ದರು. ಅವರು ಬೆಳ್ಳಾರೆಯ ಜನತೆಯ ಪರವಾಗಿ ಸಮಸ್ಯೆ ತಿಳಿಸಲು ಫೋನ್ ಮಾಡಿದ್ದರು. ಆದರೆ ಸಚಿವರಿಗೆ ನಿಂದಿಸಿದರೆಂದು ಅವರನ್ನು ರಾತ್ರೋರಾತ್ರಿ ಬಂಧಿಸಿದ ಕ್ರಮ ಸರಿಯಲ್ಲ ಎಂದರು. ಇದು ನಮ್ಮ ಸಂಘಕ್ಕೂ ಒಂದು ಕಪ್ಪು ಚುಕ್ಕೆ. ಸಾಯಿ ಗಿರಿಧರ ರೈಯವರು ಅಂತಹ ವ್ಯಕ್ತಿತ್ವದವರಲ್ಲ. ಪೊಲೀಸ್ ಇಲಾಖೆ ಅವರಿಗೆ ನಿರಂತರ ಮಾನಸಿಕ ಹಿಂಸೆ ನೀಡುತ್ತಿರುವ ಕಾರಣ ಅವರು ಮಾನಸಿಕರಾಗಿ ಖಿನ್ನತೆಗೊಳಗಾಗಿದ್ದು, ನಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಹೇಳಿದ ಅವರು, ಬೆಳ್ಳಾರೆಯ ವಿದ್ಯುತ್ ಸಮಸ್ಯೆ ನೀಗಿಸಲು ಅಧಿಕಾರಿಗಳಿಗೆ ಮಾತ್ರವಲ್ಲ ಜನಪ್ರತಿನಿಧಿಗಳಿಗೂ ಮನವಿ ಮಾಡಿದ್ದೇವೆ. ಯಾರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ರಾಜೇಶ್ ಶ್ಯಾನುಭೋಗ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಲೋಕೇಶ್ ಚಾಕೊಟೆ, ಉಪಾಧ್ಯಕ್ಷ ಅಶ್ರಫ್, ಷಣ್ಮುಖ, ಕಿರಣ್‌ಕುಮಾರ್ ಉಪಸ್ಥಿತರಿದ್ದರು.