×
Ad

ಬ್ಯಾಂಕಿಂಗ್ ವಂಚನೆ ಹಗರಣಗಳಲ್ಲಿ ಏರಿಕೆ

Update: 2016-03-02 23:20 IST

 ಮುಂಬೈ, ಮಾ.2: 2009ರಲ್ಲಿ 44,957 ಕೋಟಿ ರೂ.ನಷ್ಟಿದ್ದ ಬ್ಯಾಂಕುಗಳ ಕಾರ್ಯನಿರ್ವಹಣೇತರ ಆಸ್ತಿ (ಎನ್‌ಪಿಎ)ಯು 2015ರಲ್ಲಿ 3 ಲಕ್ಷ ಕೋಟಿ ರೂ.ಗೇರಿದ್ದು, ಬ್ಯಾಂಕಿಂಗ್ ವಲಯದಲ್ಲಿ ಏನೋ ಒಂದು ರೀತಿಯ ಗಂಭೀರವಾದ ಪ್ರಮಾದವಾಗಿದೆಯೆಂದು ಸಿಬಿಐ ನಿರ್ದೇಶಕ ಅನಿಲ್ ಸಿನ್ಹಾ ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ಅವಧಿಯಲ್ಲಿ ಪಾವತಿಯಾಗದ ಸಾಲಗಳ ಪ್ರಮಾಣವು ಶೇ.2ರಿಂದ 4.36ಕ್ಕೇರಿದೆಯೆಂದು ಅವರು ತಿಳಿಸಿದ್ದಾರೆ.
 ಮುಂಬೈಯಲ್ಲಿ ಬುಧವಾರ ಭಾರತೀಯ ಬ್ಯಾಂಕ್‌ಗಳ ಸಂಘ ಹಾಗೂ ಸಿಬಿಐನ ಏಳನೆ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ''ಬ್ಯಾಂಕುಗಳು ಸಣ್ಣ ಸಾಲಗಾರರ ಬಗ್ಗೆ ತುಂಬಾ ಕಠಿಣವಾಗಿ ವರ್ತಿಸುತ್ತಿವೆ, ಆದರೆ ದೊಡ್ಡ ಪ್ರಮಾಣದ ಸಾಲಗಾರರು ಹಾಗೂ ಬ್ಯಾಂಕ್‌ಗಳಿಗೆ ವಂಚನೆಯೆಸಗಿದವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಾರೆ ಹಾಗೂ ಅಪರಾಧದ ಲಾಭ ಪಡೆಯುತ್ತಾರೆ ಎಂದು ಆಪಾದಿಸಿದ್ದಾರೆ
  ಸಿಬಿಐ ಕೈಗೆತ್ತಿಕೊಂಡಿರುವ ಬ್ಯಾಂಕ್ ವಂಚನೆಗಳು ಹಾಗೂ ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಏರಿಕೆಯಾಗಿದೆಯೆಂದು ಅವರು ತಿಳಿಸಿದರು. 2015ರಲ್ಲಿ 20,646 ಕೋಟಿ ರೂ. ಮೊತ್ತದ ಒಟ್ಟು 171 ಬ್ಯಾಂಕಿಂಗ್‌ಅಪರಾಧ ಪ್ರಕರಣಗಳನ್ನು ಹಾಗೂ 1.20 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಹೂಡಿಕೆ ಸ್ಕೀಮ್ ವಂಚನೆ ಹಗರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಿರುವುದಾಗಿ ಅನಿಲ್ ಸಿನ್ಹಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News