ಎನ್‌ಎಸ್‌ಜಿ ಕಮಾಂಡೋಗಳು ಖಾಲಿ ಕಟ್ಟಡದತ್ತ ಗುಂಡು ಹಾರಿಸಿದ್ದರೇ?
ನವದೆಹಲಿ, ಮಾ. 2: ಪಠಾಣ್‌ಕೋಟ್ ವಾಯು ನೆಲೆಯ ಮೇಲೆ ಇತ್ತೀಚೆಗೆ ಉಗ್ರ ದಾಳಿಯಾದ ಸಂದರ್ಭದಲ್ಲಿ 4 ಉಗ್ರ ಹತ್ಯೆ ನಡೆಸಿದ ಬಳಿಕವೂ ಕಟ್ಟಡದಲ್ಲಿ ಉಳಿದಿದ್ದರೆನ್ನಲಾದ ಇನ್ನಿಬ್ಬರು ಉಗ್ರರನ್ನು ಗುರಿಯಾಗಿಸಿ ಕಾರ್ಯಾಚರಣೆಯು 48 ಗಂಟೆಗಳ ತನಕ ನಡೆದಿದ್ದರೆ, ನಮ್ಮ ಎನ್‌ಎಸ್‌ಜಿ ಕಮಾಂಡೋಗಳು ಖಾಲಿ ಕಟ್ಟಡದತ್ತ ಅಷ್ಟೂ ಹೊತ್ತು ಗುಂಡು ಹಾರಿಸಿದ್ದರೇ ಎಂಬ ಪ್ರಶ್ನೆ ಈಗ ಎದ್ದಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ.
ಫೊರೆನ್ಸಿಕ್ ಅಧಿಕಾರಿಗಳು ತಮಗೆ ಹತ್ಯೆಗೀಡಾದ ಉಗ್ರನದ್ದೆಂದು ಹೇಳಲಾದ ಅವಶೇಷಗಳಲ್ಲಿ ಯಾವುದೇ ಮಾನವ ಮೂಳೆ ಯಾ ಹಲ್ಲಿನ ಅವಶೇಷಗಳು ಪತ್ತೆಯಾಗಿಲ್ಲವೆಂದು ಹೇಳಿದ್ದಾರೆ. ರಾಷ್ಟ್ರೀಯ ತನಿಖಾ ದಳ ಹಾಗೂ ಗುಪ್ತಚರ ಬ್ಯೂರೋ ಪಠಾಣ್‌ಕೋಟ್ ದಾಳಿಯಲ್ಲಿ ನಾಲ್ಕು ಉಗ್ರರು ಹತ್ಯೆಗೀಡಾಗಿದ್ದರೆಂದು ಹೇಳಿದ್ದರೆ ಎನ್‌ಎಸ್‌ಜಿ ಕಮಾಂಡೋಗಳ ಪ್ರಕಾರ ಆರು ಉಗ್ರರು ಹತರಾಗಿದ್ದಾರೆ. ಈ ವಿವಾದವನ್ನು ಫೊರೆನ್ಸಿಕ್ ತನಿಖೆಯೂ ಬಗೆಹರಿಸುವುದು ಅಸಾಧ್ಯವಾಗಿದೆ.
ಪಠಾಣ್‌ಕೋಟ್ ದಾಳಿಯ ತನಿಖೆಗೆಂದೇ ರಚಿಸಲಾದ ಪಾಕಿಸ್ತಾನದ ವಿಶೇಷ ತನಿಖಾ ತಂಡವು ಸದ್ಯದಲ್ಲೇ ಭಾರತಕ್ಕೆ ಬರಲಿದ್ದು ಅದಕ್ಕಿಂತ ಮೊದಲು ಈ ವಿವಾದ ಬಗೆಹರಿಯಬಹುದೆಂದು ಸರಕಾರ ಅಂದುಕೊಂಡಿತ್ತು.
ಚಂಡೀಗಢದಲ್ಲಿರುವ ಸೆಂಟ್ರಲ್ ಫೊರೆನ್ಸಿಕ್ ಸಾಯನ್ಸ್ ಲ್ಯಾಬೋರೇಟರಿಯ ನಿರ್ದೇಶಕಿ ಆಶಾ ಧಿರ್ ಈ ವಿಚಾರದಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿದ್ದರೆ ಅತ್ತ ಹಿರಿಯ ಎನ್‌ಐಎ ಅಧಿಕಾರಿಯೊಬ್ಬರು ಹೇಳುವಂತೆ ಸಿಎಫ್‌ಎಸ್‌ಎಲ್‌ನ ಯಾವುದೇ ವರದಿ ಇನ್ನೂ ಬಂದಿಲ್ಲ.
ಎನ್‌ಎಸ್‌ಜಿ ಕಮಾಂಡೋಗಳ ಪ್ರಕಾರ ಅವರು 48 ಗಂಟೆಗಳ ಕಾಲ ಉಳಿದಿಬ್ಬರು ಉಗ್ರರನ್ನು ಗುರಿಯಾಗಿಸಿ ಏರ್‌ಮೆನ್ಸ್ ಬಿಲ್ಲೆಟ್‌ನತ್ತ ಗುಂಡಿನ ದಾಳಿ ನಡೆಸಿದ್ದರೆ, ಕಳೆದ ವಾರ ಏರ್‌ಮೆನ್ಸ್ ಬಿಲ್ಲೆಟ್‌ನಲ್ಲಿ ಏಳು ಸುತ್ತುಗಳ ತಪಾಸಣಾ ಕಾರ್ಯ ಮುಕ್ತಾಯಗೊಂಡರೂ ಅಲ್ಲೆಲ್ಲೂ ಯಾವುದೇ ಶಸ್ತ್ರಾಸ್ತ್ರಗಳ, ಗ್ರೆನೇಡುಗಳ ಯಾ ಮಾನವ ಮೂಳೆಗಳ ಒಂದು ಚೂರು ಕೂಡ ಪತ್ತೆಯಾಗಿಲ್ಲವೆಂದು ತಿಳಿದು ಬಂದಿದೆ.