ಸ್ವರ್ಣೋದ್ಯಮಿಗಳಿಂದ ಮುಷ್ಕರ: ಉಡುಪಿಯ ಚಿನ್ನದಂಗಡಿಗಳು ಬಂದ್
ಉಡುಪಿ, ಮಾ.2: ಕೇಂದ್ರ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಚಿನ್ನಾಭರಣ ವ್ಯಾಪಾರಿಗಳಿಗೆ ಸಂಬಂಧಿಸಿದಂತೆ ಹೊಸ ದಾಗಿ ವಿಧಿಸಿರುವ ಟಿಸಿಎಸ್ ಶುಲ್ಕ ಹಾಗೂ ಹೆಚ್ಚುವರಿ ಅಬಕಾರಿ ಶುಲ್ಕ ವನ್ನು ವಿರೋಧಿಸಿ ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯ ಎಲ್ಲಾ ಚಿನ್ನಾಭರಣ ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸಲಾಗುವುದು ಎಂದು ಉಡುಪಿ ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಜಯ ಸಿ. ಆಚಾರ್ಯ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲೇ ಸಂಕಷ್ಟಗಳಿಂದ ತತ್ತರಿಸುತ್ತಿರುವ ಸ್ವರ್ಣ ಉದ್ಯಮ ಕೇಂದ್ರ ಸರಕಾರ ಬಜೆಟ್‌ನಲ್ಲಿ ವಿಧಿಸಿರುವ ವಿವಿಧ ಶುಲ್ಕಗಳಿಂದ ಸಂಪೂರ್ಣ ಕಂಗೆಟ್ಟಿದೆ. ಇದು ಗಾಯದ ಮೇಲೆ ಬರೆ ಎಳೆದಂತೆ ಎಂದು ವಿವರಿಸಿದರು.
ಕೇಂದ್ರ ಸರಕಾರದ ಈ ನೀತಿ ಯನ್ನು ಖಂಡಿಸಿ ಭಾರತದ ಜೆಮ್ ಆ್ಯಂಡ್ ಜ್ಯುವೆಲ್ಲರಿ ಹಾಗೂ ಇಂಡಿಯನ್ ಬಲಿಯನ್ ಜ್ಯುವೆಲ್ಲರ್ಸ್ ಅಸೋ ಸಿಯೇಶನ್ ನೀಡಿರುವ ಕರೆಯಂತೆ ಮಾ.2ರಿಂದ 4ರವರೆಗೆ ಎಲ್ಲಾ ವ್ಯವ ಹಾರಗಳನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗಿಯಾಗಿದ್ದೇವೆ ಎಂದವರು ನುಡಿ ದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಸುಧೀರ್ ಶೇಟ್, ರವಿಶಂಕರ್ ಶೇಟ್, ಯೋಗೇಶ್ ಆಚಾರ್ಯ, ಮೋಹನ್ ಎಂ.ಪಿ. ಉಪಸ್ಥಿತರಿದ್ದರು.