ಉಡುಪಿ: ದ್ವಿತೀಯ ಪಿಯು ಪರೀಕ್ಷೆಗೆ 14,845 ವಿದ್ಯಾರ್ಥಿಗಳು
ಉಡುಪಿ, ಮಾ.2: ಮಾ.11ರಿಂದ 28ರವರೆಗೆ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಸುವ ಸಂಬಂಧ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಅಧ್ಯಕ್ಷತೆಯಲ್ಲಿ ಇಂದು ಶಿಕ್ಷಣ ಇಲಾಖೆಯ ಸಭೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ವಿದ್ಯಾಂಗ ಇಲಾಖೆಗಳ ಸಮನ್ವಯ ದೊಂದಿಗೆ ಎಲ್ಲ ವ್ಯವಸ್ಥೆ ಗಳನ್ನು ಮಾಡಿಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ನಮ್ಮ ಜಿಲ್ಲೆಯಲ್ಲಿ ವಿದ್ಯಾರ್ಥಿ ಗಳ ಅನುಕೂಲಕ್ಕಾಗಿ ಹೆಲ್ಪ್‌ಲೈನ್ ತೆರೆಯಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಬಿ.ನಾಯಕ್ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಈ ಬಾರಿ ಒಟ್ಟು 29 ಪರೀಕ್ಷಾ ಕೇಂದ್ರಗಳಿದ್ದು, 14,845 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿರುವರು. ಇವರಲ್ಲಿ 2,447 ಕಲಾ ವಿಭಾಗದ ವಿದ್ಯಾರ್ಥಿಗಳು, 8,006 ವಾಣಿಜ್ಯ ವಿಭಾಗ ಹಾಗೂ 4,392 ಮಂದಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸೇರಿದ್ದಾರೆ ಎಂದವರು ವಿವರಿಸಿದರು.
ಎಲ್ಲ 29 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅನುಕೂಲಕರ ವಾತಾವರಣವಿರಬೇಕು. ನೀರು, ಶೌಚಾಲಯ ವ್ಯವಸ್ಥೆ ಗಳಲ್ಲಿ ಲೋಪವಾ ಗಬಾರದು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಪರೀಕ್ಷೆ ನಡೆಯುವ ಕೇಂದ್ರಗಳಲ್ಲಿ ವಿದ್ಯುತ್ ಸಂಪರ್ಕದ ಕೊರತೆಯುಂಟಾಗದಂತೆ ಮೆಸ್ಕಾಂಗೆ ಪತ್ರ ಬರೆಯಿರಿ ಹಾಗೂ ವಿದ್ಯುತ್ ವ್ಯತ್ಯಯದ ಮಾಹಿತಿ ಇರುವೆಡೆ ಸೌಂಡ್‌ಲೆಸ್ ಜನರೇಟರ್ ಅಳವಡಿಸಿ ಎಂದು ಸೂಚನೆ ನೀಡಿದರು. ಮಕ್ಕಳ ಆರೋಗ್ಯದ ಬಗ್ಗೆಯೂ ಎಚ್ಚರವಿರಲಿ. ಪರೀಕ್ಷೆ ಬರೆಯುವ ವೇಳೆ ಒತ್ತಡ ಸೃಷ್ಟಿಸದೆ ತಣ್ಣಗೆ ಪರೀಕ್ಷೆ ಬರೆಯುವ ವ್ಯವಸ್ಥೆ ಕಲ್ಪಿಸಿ ಎಂದೂ ಡಾ.ವಿಶಾಲ್ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಪ್ರತೀ ಪರೀಕ್ಷಾ ಕೇಂದ್ರಕ್ಕೆ ಆಯಾಯ ಕಾಲೇಜಿನ ಪ್ರಾಂಶುಪಾಲರನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಲಾಗಿದೆ. ಬೇರೆ ಸಂಸ್ಥೆಯ ಹಿರಿಯ ಉಪನ್ಯಾಸಕರು ಸಹ ಮುಖ್ಯ ಅಧೀಕ್ಷಕರಾಗಿರುತ್ತಾರೆ. ಪರೀಕ್ಷಾ ಅಕ್ರಮ ತಡೆಗೆ 3 ಜಾಗೃತ ದಳ ಮತ್ತು 3 ಮೊಬೈಲ್ ಸ್ಕ್ವಾಡ್‌ಗಳು ಕಾರ್ಯನಿರ್ವಹಿಸಲಿವೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್‌ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ. ಸಭೆಯಲ್ಲಿ ವಿದ್ಯಾಂಗ ಉಪ ನಿರ್ದೇಶಕ ದಿವಾಕರ ಶೆಟ್ಟಿಯವರನ್ನೊಳಗೊಂಡಂತೆ ಬಿಇಒಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.