×
Ad

‘ಎಬಿವಿಪಿ ಮೂಲಕ ಕಾಂಗ್ರೆಸ್ ಮುಖಂಡರ ಅವಹೇಳನ’

Update: 2016-03-02 23:41 IST

ಮಂಗಳೂರು, ಮಾ.2: ನಗರದಲ್ಲಿ ಇತ್ತೀಚೆಗೆ ನಡೆದ ಎಬಿವಿಪಿ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರನ್ನು ಅವಹೇಳನ ಮಾಡಿರುವುದುನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಎಬಿವಿಪಿಯನ್ನು ಬಳಸಿಕೊಂಡು ವಿಶ್ವ ವಿದ್ಯಾನಿಲಯಗಳಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ತಮ್ಮ ಕಾರ್ಯಸೂಚಿಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಈ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸದ್ದಿರೆ ಇದರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸತ್ಯವನ್ನು ಮರೆಮಾಚಿ ದೇಶದ ಸಂಸತ್ತನ್ನು ದಾರಿತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಎಬಿವಿಪಿಯ ಮುಖಂಡರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಬಗ್ಗೆ ಅನುಚಿತವಾದ ಮಾತುಗಳನ್ನಾಡಿದ್ದಾರೆ. ಕಾಂಗ್ರೆಸ್ ನಾಯಕರ ಬಗ್ಗೆ ಅಪಪ್ರಚಾರದ ಮಾತುಗಳನಾಡುತ್ತಾ ವಿದ್ಯಾರ್ಥಿಗಳನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಎಬಿವಿಪಿ ಮೂಲಕ ದಿಲ್ಲಿ ಮತ್ತು ಹೈದರಾಬಾದ್ ವಿಶ್ವ ವಿದ್ಯಾನಿಲಯಗಳಲ್ಲಿ ಹಿಂಸೆಯನ್ನು ಪ್ರಚೋದಿಸುವ ಕೆಲಸವನ್ನು ಬಿಜೆಪಿ ನಡೆಸುತ್ತಿದೆ ಈ ಕೃತ್ಯವನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಪಿ.ವಿ.ಮೋಹನ್ ತಿಳಿಸಿದರು.

ಜಮ್ಮು ಕಾಶ್ಮೆರದಲ್ಲಿ ಅಫ್ಝಲ್ ಗುರುವನ್ನು ಹುತಾತ್ಮ ಎಂದು ಘೋಷಿಸಿದ ಪಿಡಿಪಿ ಸಂಘಟನೆಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡು, ಇನ್ನೊಂದು ಕಡೆ ಅಫ್ಝಲ್ ಗುರುವನ್ನು ದೇಶದ್ರೋಹಿ ಎನ್ನುತ್ತಿದೆ. ಸ್ವಾತಂತ್ರ ಸಂಗ್ರಾಮದ ಸಂದರ್ಭದಲ್ಲೂ ಆರೆಸ್ಸೆಸ್ ಈ ರೀತಿಯ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಾ ಬಂದಿತ್ತು. ಗೋಳ್ವಾಲ್ಕರ್ ಆಗಲಿ, ಇತರ ಆರೆಸ್ಸೆಸ್ ನಾಯಕರುಸ್ವಾತಂತ್ರ ಹೋರಾಟದಲ್ಲಿ ಬಿಟ್ರಿಷರೊಂದಿಗೆ ಸಂಧಾನ ಮಾಡಿ ಕೊಂಡವರು. ವಿನಾಯಕ ದಾಮೋದರ ಸಾವರ್ಕರ್ ಬ್ರಿಟಿಷರಿಂದ ಬಂಧನಕ್ಕೊಳಗಾದಾಗ ಬಿಡುಗಡೆಗಾಗಿ ಕ್ಷಮೆ ಕೋರಿದವರು. ಆರೆಸ್ಸೆಸ್ ಕಚೇರಿಗಳೆದುರು ತ್ರಿವರ್ಣ ಧ್ವಜವನ್ನು ಏರಿಸದವರು ರಾಷ್ಟ್ರಭಕ್ತಿಯ ಬಗ್ಗೆ ಮಾತನಾಡುತ್ತಾರೆ. ಜೆಎನ್‌ಯು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರದರ್ಶಿಸುತ್ತಿರುವ ವೀಡಿಯೊ ನಕಲಿ ಎನ್ನುವುದು ಈಗ ಪರೀಕ್ಷೆಯಿಂದ ಬೆಳಕಿಗೆ ಬಂದಿದೆ ಎಂದು ಪಿ.ವಿ.ಮೋಹನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಟಿ.ಕೆ.ಸುಧೀರ್, ರಾಧಾಕೃಷ್ಣ, ಸುರೇಶ್ ಶೆಟ್ಟಿ, ಶರೀಫ್ ದೇರಳಕಟ್ಟೆ, ಲುಕ್ಮಾನ್ ಬಂಟ್ವಾಳ ಮೊದಲಾದವರು ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News