ಅಫ್ಘಾನ್: ಭಾರತೀಯ ದೂತಾವಾಸದ ಹೊರಗೆ ಆತ್ಮಹತ್ಯಾ ಬಾಂಬರ್ ದಾಳಿ
ಜಲಾಲಾಬಾದ್,ಮಾ.2: ಜಲಾಲಾಬಾದ್‌ನಲ್ಲಿ ಬುಧವಾರ ಮಧ್ಯಾಹ್ನ ಭಾರತೀಯ ದೂತಾವಾಸದ ಬಳಿ ಭಾರೀ ಸ್ಫೋಟಗಳು ಮತ್ತು ಗುಂಡುಗಳ ಹಾರಾಟ ನಡೆದಿದೆ. ಆತ್ಮಹತ್ಯಾ ಬಾಂಬರ್ ಓರ್ವ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದು,ಇತರ ನಾಲ್ವರು ದಾಳಿಕೋರರು ಅಫ್ಘಾನ್ ಭದ್ರತಾ ಪಡೆಗಳ ಗುಂಡುಗಳಿಗೆ ಬಲಿಯಾಗಿದ್ದಾರೆ.
ಓರ್ವ ನಾಗರಿಕ ಸಾವನ್ನಪ್ಪಿದ್ದು, ಇತರ 14 ಜನರು ಗಾಯಗೊಂಡಿದ್ದಾರೆ. ಎಲ್ಲ ಭಾರತೀಯರು ಸುರಕ್ಷಿತ ರಾಗಿದ್ದಾರೆಂದು ಹೇಳಲಾಗಿದೆ. ಆತ್ಮಹತ್ಯಾ ಬಾಂಬರ್ ಭಾರತೀಯ ದೂತಾವಾಸವನ್ನು ಗುರಿಯಾಗಿಸಿಕೊಂಡಿದ್ದ ಎಂದು ಸರಕಾರಿ ಮೂಲಗಳು ತಿಳಿಸಿವೆ.
ದೂತಾವಾಸದ ಆವರಣದೊಳಗೂ ಒಂದು ಗ್ರೆನೇಡ್‌ನ್ನು ಎಸೆಯಲಾಗಿತ್ತೆಂದು ವರದಿಗಳು ತಿಳಿಸಿವೆ.
ಗುಂಡು ಹಾರಾಟ ಆರಂಭಗೊಂಡ ಕೂಡಲೇ ಗುಂಡು ನಿರೋಧಕ ವಾಹನಗಳಲ್ಲಿ ಭದ್ರತಾ ಪಡೆಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಸಾರ್ವಜನಿಕರು ಭೀತರಾಗಿ ಕಾಲಿಗೆ ಬುದ್ಧಿ ಹೇಳುತ್ತಿರುವ ದೃಶ್ಯ ಕಂಡು ಬಂದಿತ್ತು.
ದೂತಾವಾಸದ ಸುರಕ್ಷತೆಯ ಹೊಣೆ ಹೊತ್ತುಕೊಂಡಿರುವ ಐಟಿಬಿಪಿ ಯೋಧರು ಮತ್ತು ಅಫ್ಘಾನ್ ಭದ್ರತಾ ಸಿಬ್ಬಂದಿಗಳು ಸಮೀಪದ ಗೆಸ್ಟ್ ಹೌಸ್‌ನಿಂದ ಗುಂಡುಗಳನ್ನು ಹಾರಿಸುತ್ತಿದ್ದ ಭಯೋತ್ಪಾದಕರ ಮೇಲೆ ಪ್ರತಿದಾಳಿ ನಡೆಸಿದರು.
ಸ್ಫೋಟದಿಂದಾಗಿ ಸಮೀಪದ ಕಟ್ಟಡಗಳ ಕಿಟಕಿ ಮತ್ತು ಬಾಗಿಲುಗಳ ಗಾಜುಗಳು ಹುಡಿಯಾಗಿದ್ದು, ಕನಿಷ್ಠ ಎಂಟು ಕಾರುಗಳು ಧ್ವಂಸಗೊಂಡಿವೆ
ದಾಳಿಯ ಹೊಣೆಯನ್ನು ಯಾವುದೇ ಭಯೋತ್ಪಾದಕ ಗುಂಪು ಹೊತ್ತುಕೊಂಡಿಲ್ಲ. ಜನವರಿಯಲ್ಲಷ್ಟೇ ಸಮೀಪದ ಪಾಕಿಸ್ತಾನಿ ದೂತಾವಾಸದ ಮೇಲೆ ದಾಳಿ ನಡೆದಿದ್ದು, ನಂಗ್ರಹಾರ್ ಪ್ರಾಂತದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಐಸಿಸ್ ಅದರ ಹೊಣೆಯನ್ನು ಹೊತ್ತುಕೊಂಡಿತ್ತು. ಜಲಾಲಾಬಾದ್ ನಂಗ್ರಹಾರ್ ಪ್ರಾಂತದ ರಾಜಧಾನಿಯಾಗಿದೆ.
ಜನವರಿಯಲ್ಲಿ ಉತ್ತರ ಅಫ್ಘಾನಿಸ್ತಾನದ ಮಝರ್-ಇ-ಷರೀಫ್ ನಗರದಲ್ಲಿರುವ ಭಾರತೀಯ ದೂತಾವಾಸದ ಮೇಲೂ ಭಯೋತ್ಪಾದಕರು ದಾಳಿ ನಡೆಸಿದ್ದರು.