ಮಂಗಳೂರಿನಲ್ಲಿ ಸಂಚರಿಸಲಿದೆ ಸಂಚಾರಿ ಮತ್ಸದರ್ಶಿನಿ!
ಮಂಗಳೂರು, ಮಾ. 4: ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಮಂಗಳೂರಿನಲ್ಲಿ ಶೀಘ್ರದಲ್ಲೇ ಮತ್ಸದರ್ಶಿನಿ (ಮೀನು ಕ್ಯಾಂಟೀನ್) ಸಂಚರಿಸಲಿದೆ. ಮಾ. 6ರಂದು ನಗರದ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಸಂಚಾರಿ ಮತ್ಸದರ್ಶಿನಿಗೆ ಚಾಲನೆ ದೊರೆಯಲಿದೆ ಎಂದು ಕೆಎಫ್‌ಡಿಸಿ ಆಡಳಿತ ನಿರ್ದೇಶಕ ವಿ.ಕೆ. ಶೆಟ್ಟಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಭಾರತದ ಅತಿದೊಡ್ಡ ಮೀನು ಹಬ್ಬ ಮತ್ಸಮೇಳವನ್ನು ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿಗಾರರ ಜತೆ ವಾತನಾಡುತ್ತಾ ಈ ವಿಷಯ ತಿಳಿಸಿದರು.
ಟಾಟಾ ಏಸ್ ಸೂಪರ್ ವಾಹನದ ಚೇಸಿಸನ್ನು ಬಳಸಿಕೊಂಡು ನಿರ್ಮಿಸಲಾದ ಸಂಚಾರಿ ಮತ್ಸದರ್ಶಿನಿಯು ವಾರವಿಡೀ ಮಂಗಳೂರಿನಲ್ಲಿ ವಿವಿಧ ಮೀನು ಖಾದ್ಯಗಳು, ಅಡುಗೆಗೆ ಉಪಯೋಗಿಸುವ ಮೀನುಗಳೊಂದಿಗೆ ನಗರವನ್ನು ಸುತ್ತಲಿದೆ. ವಾಹನವು ರೆಫ್ರಿಜರೇಟರ್, ಮೀನನ್ನು ತಾಜಾವಾಗಿಡಲು ಅಗತ್ಯವಾದ ಸಲಕರಣೆಗಳು, ಮೀನು ಫ್ರೈ ಮಾಡಲು ಇಲೆಕ್ಟಿರಕಲ್ ಗ್ರಿಲ್, ನೀರಿನ ಟ್ಯಾಂಕ್, ಮೀನಿನ ತ್ಯಾಜ್ಯವನ್ನು ಸಂಗ್ರಹಕ್ಕೆ ತ್ಯಾಜ್ಯ ತೊಟಟಿ ಹಾಗೂ ಇತರ ಅಗತ್ಯ ಸಾಮಗ್ರಿಗಳನ್ನು ಮತ್ಸದರ್ಶಿನಿ ಹೊಂದಲಿದೆ. 12 ಲಕ್ಷ ರೂ. ಮೌಲ್ಯದ ಮತ್ಸದರ್ಶಿನಿ ರವಿವಾರ ಪಿಲಿಕುಳದ ನಿಸರ್ಗಧಾಮದಲ್ಲಿದ್ದು, ಅಲ್ಲಿಗೆ ಬರುವ ಮೀನು ಪ್ರಿಯ ಪ್ರವಾಸಿಗರಿಗೆ ರುಚಿ ರುಚಿಯ ಖಾದ್ಯಗಳನ್ನು ಮಿತ ದರದಲ್ಲಿ ಒದಗಿಸಲಿದೆ ಎಂದು ಅವರು ಹೇಳಿದರು.
ಉಳಿದ ದಿನಗಳಲ್ಲಿ ಮಂಗಳೂರಿನ ಆಯ್ದ 10 ಕಡೆಗಳಲ್ಲಿ ಈ ಮತ್ಸದರ್ಶಿನಿ ಸಂಚರಿಸಲಿದೆ. ಮೀನುಗಳನ್ನು ತುಂಡು ಮಾಡಿ ಸ್ವಚ್ಛಗೊಳಿಸಿ ಗ್ರಾಹಕರಿಗೆ ಆಯ್ದ ಸ್ಥಳಗಳಲ್ಲಿ ಮಾರಾಟ ಮಾಡುವ ಔಟ್‌ಲೆಟ್‌ಗಳನ್ನು ಕೂಡಾ ಶೀಘ್ರದಲ್ಲೇ ಮಂಗಳೂರಿನಲ್ಲಿ ಆರಂಭಿಸಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಹೈದರಾಬಾದ್ ಕರ್ನಾಟಕದ 10 ಕಡೆಗಳಲ್ಲಿ ಕೆಎಫ್‌ಡಿಸಿ ಮೀನು ಔಟ್‌ಲೆಟ್‌ಗಳು ಆರಂಭಗೊಳ್ಳಲಿದೆ ಎಂದು ಅವರು ಹೇಳಿದರು.
ಆನ್‌ಲೈನ್‌ನಲ್ಲೂ ಲಭ್ಯವಾಗಲಿದೆ ಮೀನು!
ಕೆಎಫ್‌ಡಿಸಿ ವತಿಯಿಂದ ಮಂಗಳೂರು ನಗರದಲ್ಲಿ buyfish.in ಆನ್‌ಲೈನ್ ಮೂಲಕವೂ ಮೀನು ಗ್ರಾಹಕರ ಮನೆ ಬಾಗಿಲಿಗೆ ಪೂರೈಕೆಯಾಗಲಿದೆ. ಮತ್ಸದರ್ಶಿನಿ ಮೇಳದಲ್ಲಿ ಆನ್‌ಲೈನ್ ಮೀನು ಮಾರಾಟಕ್ಕೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಚಾಲನೆ ನೀಡಿದರು.
ಮತ್ಸಮೇಳದ ಉದ್ಘಾಟನಾ ಸಮಾರಂಭದ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಬೈಫಿಶ್ ಡಾಟ್ ಇನ್ ಆನ್‌ಲೈನ್‌ನ ಕೇದಾರ್‌ನಾಥ್ ರೆಡ್ಡಿ, ಈ ವೆಬ್‌ಪೋರ್ಟಲ್ ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿಯ 40 ಮೀನು ಪೂರೈಕೆದಾರರನ್ನು ಹೊಂದಿದೆ ಎಂದರು. 2013ರಲ್ಲಿ ಬೆಂಗಳೂರಿನಲ್ಲಿ ಈ ಪೋರ್ಟಲ್ ಆರಂಭಗೊಂಡಿದ್ದು, ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಗ್ರಾಹಕರ ಮನೆ ಬಾಗಿಲಿಗೆ ತಾಜಾ ಹಾಗೂ ಶುದ್ಧವಾದ ಮೀನು ತಲುಪಿಸಲಾಗುತ್ತದೆ. ಈ ವೆಬ್‌ಪೋರ್ಟಲ್ ಮುಂಬೈನಲ್ಲಿ ಎಪ್ರಿಲ್ 1ರಿಂದ ಕಾರ್ಯಾರಂಭಿಸಲಿದೆ ಎಂದು ಅವರು ಹೇಳಿದರು.
ಮಂಗಳೂರಿನಲ್ಲಿ ಮೀನಿನ ಸ್ಥಿರ ದರ ನಿಗದಿಯಾಗಬೇಕು: ಜಿಲ್ಲಾಧಿಕಾರಿ
ಕರಾವಳಿ ಜಿಲ್ಲೆಯಾದ ದಕ್ಷಿಣಕನ್ನಡದಿಂದ ದೇಶ ವಿದೇಶಗಳಿಗೆ ಮೀನು ರಫ್ತಾಗುತ್ತಿದ್ದು, ಇಡೀ ದೇಶದ ಮೀನುಗಳ ಸ್ಥಿರವಾದ ದರ ಮಂಗಳೂರಿನಿಂದಲೇ ನಿಗದಿಯಾಗುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅಭಿಪ್ರಾಯಿಸಿದರು.
ಅವರು ಇಂದು ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಮೀನುಗಾರಿಕೆ ಮಹಾವಿದ್ಯಾಲಯ ಮಂಗಳೂರು ಮತ್ತು ಮೀನುಗಾರಿಕೆ ಇಲಾಖೆ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಹೈದರಾಬಾದ್ ಮತ್ತು ಕರ್ನಾಟಕ ಮತ್ತು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಭಾರತದ ಅತಿ ದೊಡ್ಡ ಮೀನು ಹಬ್ಬ ‘ಮತ್ಸ್ಯಮೇ’ವನ್ನು ಉದ್ಘಾಟಿಸಿ ಮಾತನಾಡಿದರು.
ಕಿರಿದಾದ ಅಕ್ವೇರಿಯಂಗೆ ಅಲಂಕಾರಿಕ ಮೀನುಗಳನ್ನು ಬಿಡುವ ಮೂಲಕ ವಿಶೇಷವಾಗಿ ಮೇಳವನ್ನು ಉದ್ಘಾಟಿಸಿದ ಅವರು, ತೈಲ ಉತ್ಪನ್ನ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ಆಯಾ ಕ್ಷೇತ್ರದಲ್ಲಿಯೇ ದರ ನಿಗದಿಯಾಗುತ್ತದೆ. ಅಂತೆಯೇ ಮೀನಿಗೆ ದರ ನಿಗದಿಯಾಗುವುದು ಮಂಗಳೂರಿನಲ್ಲಿ ಎಂಬುದನ್ನು ದೇಶ ಗುರುತಿಸುವಂತಾಗಬೇಕು ಎಂದು ಹೇಳಿದರು.
ಕರಾವಳಿ ಭಾಗದಲ್ಲಿ ಮತ್ಯೋದ್ಯಮ ಪ್ರಮುಖ ಉದ್ಯಮವಾಗಿ ಬೆಳೆದಿದ್ದು, ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಿದೆ. ಹಾಗಿದ್ದರೂ ಮೀನಿನ ಉಪ ಉತ್ಪನ್ನಗಳಗಳ ಉದ್ಯಮ ಇನ್ನೂ ವಿಸ್ತಾರವಾಗಿಲ್ಲ. ಮೀನಿನಿಂದ ಎಣ್ಣೆ ತೆಗೆಯುವಿಕೆ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಅಲಂಕಾರಿಕ ಮೀನುಗಳ ಸಾಕಣಿಕೆಯ ಅಕ್ವೇರಿಯಂ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಕೆಲಸ ಆಗಬೇಕು. ಇದಕ್ಕಾಗಿ ಈ ವಿವಿಧ ಮಜಲುಗಳ ಕುರಿತು ವ್ಯಾಪಕ ಸಂಶೋಧನೆಯ ಅತ್ಯವಿದೆ ಎಂದು ಅವರು ಹೇಳಿದರು.
ಮೇಯರ್ ಜೆಸಿಂತಾ ವಿಜಯಾ ಆಲ್ರೆಡ್, ಪಾಲಿಕೆ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ,ಕೆಎ್ಡಿಸಿ ಮುಖ್ಯಸ್ಥ ಹಿರಿಯಣ್ಣ ಸಮಾರಂಭವನ್ನುದ್ದೇಶಿಸಿ ವಾತನಾಡಿದರು.
ಕೆಎಫ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ, ಮತ್ಸ್ಯ ಮೇಳದ ಮುಖ್ಯಸ್ಥ ಡಾ.ಕೆ.ಎಂ.ಶಂಕರ್, ಉಪಾಧ್ಯಕ್ಷ ಡಾ.ಎಸ್.ಎಂ.ಶಿವಪ್ರಕಾಶ್, ಸಂಘಟನಾ ಕಾರ್ಯದರ್ಶಿ ಡಾ.ಶಿವಕುಮಾರ್ ಮಗದ, ಕೆ.ಗಣಪತಿ ಭಟ್ ವೇದಿಕೆಯಲ್ಲಿದ್ದರು.