ಕಡಬ: ಮೆಸ್ಕಾಂಗೆ ಮುತ್ತಿಗೆ
ಕಡಬ, ಮಾ.4. ಇಲ್ಲಿನ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ಹಾಗೂ ಮೂರಾಜೆ ಪರಿಸರದ ಕೃಷಿಕರು ವಿದ್ಯುತ್ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ಕಡಬ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿದ ಘಟನೆ ಶುಕ್ರವಾರದಂದು ನಡೆದಿದೆ. ಕಡಬ ಉಪವಿಭಾಗ ಕೇಂದ್ರದಿಂದ ಮೂರಾಜೆ ಮತ್ತು ದೊಡ್ಡಕೊಪ್ಪ ಪರಿಸರದ ಹಲವು ಕೃಷಿಕರು ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕುಮಾರಧಾರಾ ನದಿಗೆ ಪಂಪ್‌ಸೆಟ್ ಅಳವಡಿಸಲಾಗಿತ್ತು. ಆದರೆ ಕಳೆದ ಕೆಲವು ತಿಂಗಳುಗಳಿಂದ ಪ್ರಥಮ ದರ್ಜೆ ಗುತ್ತಿಗೆದಾರರ ಕುಮ್ಮಕ್ಕಿನಿಂದ ಸುಳ್ಯ ತಾಲೂಕಿನ ಎಡಮಂಗಲ ಗ್ರಾಮಕ್ಕೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಇದರಿಂದಾಗಿ ದೊಡ್ಡಕೊಪ್ಪ ಹಾಗೂ ಮೂರಾಜೆ ಪರಿಸರದಲ್ಲಿ ವಿದ್ಯುತ್ ಸಮಸ್ಯೆಯಾಗುತ್ತಿದೆ. ಕಡಬ ಪರಿಸರದಲ್ಲಿ ಹಲವು ಸಮಯಗಳಿಂದ ವಿದ್ಯುತ್ ಸಮಸ್ಯೆಗಳಿರುವಾಗ ಸುಳ್ಯ ತಾಲೂಕಿಗೆ ಕಡಬ ಉಪ ವಿಭಾಗದಿಂದ ಯಾಕಾಗಿ ವಿದ್ಯುತ್ ಸರಬರಾಜು ಮಾಡಬೇಕೆಂದು ಪ್ರಶ್ನಿಸಿದ ಗ್ರಾಮಸ್ಥರು ಕಡಬ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಸತೀಶ್ ನಾಯಕ್ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಒಂದು ವಾರದೊಳಗೆ ಈ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಮೆಸ್ಕಾಂ ಕಛೇರಿಯ ಮುಂದೆ ಉಗ್ರ ರೀತಿಯ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಡಬ ಗ್ರಾ.ಪಂ.ಸದಸ್ಯರಾದ ಆದಂ ಕುಂಡೋಳಿ ಹಾಗೂ ಇಂದಿರಾ, ಪ್ರಮುಖರಾದ ಸೋಮಪ್ಪ ಪಿ, ರಮೇಶ್, ಜಯರಾಂ ಮೂರಾಜೆ, ಸೋಮಪ್ಪ ಪಟ್ನ, ವೆಂಕಪ್ಪ ದೊಟ್ಟಕೊಪ್ಪ, ಕೃಷ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.