×
Ad

ದೇರಳಕಟ್ಟೆ: ಕ್ಷೇಮದಲ್ಲಿ ತಂಬಾಕು ವರ್ಜನ ಕೇಂದ್ರ ಉದ್ಘಾಟನೆ

Update: 2016-03-04 17:58 IST

ಕೊಣಾಜೆ: ಪ್ರಸ್ತುತ ದಿನಗಳಲ್ಲಿ ಮನಶಾಸ್ತ್ರಜ್ಞರು ವೈದ್ಯಕೀಯ ಕ್ಷೇತ್ರದಲ್ಲಿಯೇ ಮುಂಚೂಣಿಯಲ್ಲಿದ್ದಾರೆ, ಅವರಿಂದ ಎಲ್ಲವೂ ಸಾಧ್ಯ ಎಂಬುದನ್ನು ನಿರೂಪಿಸಿದ್ದಾರೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.
 ನಿಟ್ಟೆ ವಿಶ್ವವಿದ್ಯಾಲಯದ ಕ್ಷೇಮ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಲಾದ ತಂಬಾಕು ವರ್ಜನ ಕೇಂದ್ರ ಉದ್ಘಾಟಿಸಿ ಬಳಿಕ ನಡೆದ ಕುಟುಂಬ ಸಹಮಿಲನ ಸಭೆಯಲ್ಲಿ ಅವರು ಮಾತನಾಡಿದರು.
 ಎ.ವಿ.ಬಾಳಿಗಾ ಸಮೂಹ ಸಂಸ್ಥೆಯ ನಿರ್ದೇಶಕ ಡಾ.ಪಿ. ಭಂಡಾರಿ ಮಾತನಾಡಿ ಕ್ಷೇಮದಲ್ಲಿ ಮನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸತೀಶ್ ರಾವ್ ಅವರ ಕಾರ್ಯವೈಖರಿ, ಜನರಲ್ಲಿ ಬದಲವಾಣೆ ತರುವ ಪ್ರಯತ್ನ, ಸಮಾಜದ ಪಿಡುಗನ್ನು ದೂರಮಾಡುವ ಅವರ ಭಿನ್ನ ಚಿಂತನೆಗಳು ಮುನ್ನಾಭಾಯಿು ಎಂ.ಬಿ.ಬಿ.ಎಸ್ ಚಿತ್ರದ ಪ್ರಮುಖ ಪಾತ್ರವನ್ನು ನೆನಪಿಸುತ್ತದೆ ಎಂದು ಶ್ಲಾಘಿಸಿ ತಂಬಾಕು ಸೇವನೆ ಅಮಲು ವ್ಯಸನಗಳ ದಾಸನಾಗುವುದಕ್ಕೆ ಮೊದಲ ರಹದಾರಿ ಎಂಬುದನ್ನು ಜನರು ಅರಿತುಕೊಳ್ಳಬೇಕು ಎಂದು ನೆನಪಿಸಿದರು.
 ಒಂದೊಮ್ಮೆ ತಂಬಾಕು ಸೇವನೆ ತಮಾಷೆ ಅಥವಾ ಮೋಜಿಗಾಗಿ ಕಂಡರೂ ಮುಂದೆ ಅದು ಚಟವಾಗಿ ಮದ್ಯ, ಡ್ರಗ್ಸ್ ಹಂತಕ್ಕೆ ತಲುಪಿ ವ್ಯಸನಗಳ ದಾಸರಾಗುತ್ತಾ ಸಾಗುತ್ತಾರೆ. ವ್ಯಸನಗಳ ದಾಸರಾಗುವುದಕ್ಕೆ ಮುಂಚಿತವಾಗಿ ಮುನ್ನೆಚ್ಚರಿಕೆ ಅಗತ್ಯ. ಕೆಲವೊಂದು ತಿಂಡಿಗಳಲ್ಲಿ ನಿಕೋಟಿನ್ ಅಂಶವಿರುವುದರಿಂದ ಮುಂದಕ್ಕೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ನಿಕೋಟಿನ್ ಅಂಶ ಇರುವ ಪದಾರ್ಥ ಸೇವನೆಗೆ ಅವಕಾಶ ಮಾಡಿ ಕೊಡುತ್ತದೆ. ವೈದ್ಯರು ರೋಗಿಗಳಲ್ಲಿ ಮುಕ್ತವಾಗಿ ಚರ್ಚಿಸಬೇಕು. ಯಾವ ಪ್ರಮಾಣದಲ್ಲಿ ಸೇವಿಸಿದ್ದು ಎಂಬ ಮಾಹಿತಿ ಪಡೆದು ಸಲಹೆ ಕೊಡಬೇಕು. ತಂಬಾಕು ಸೇವನೆಯಿಂದ ಕೇವಲ ಕ್ಯಾನ್ಸರ್ ಮಾತ್ರವಲ್ಲ, ಲೈಂಗಿಕ ಸಮಸ್ಯೆಗಳು ಕಾಡುತ್ತವೆ. ತಂಬಾಕು ಸೇವಿಸದಂತೆ ಜಾಗೃತಿ ಮೂಡಿಸಬೇಕು ಎಂದು ನುಡಿದರು.
 ಬುದ್ಧಿವಂತ ಸಮಾಜದ ಲಕ್ಷಣದಂತೆ ಕಾಯಿಲೆ ಹರಡದಂತೆ ನೋಡಿಕೊಳ್ಳಬೇಕು. ಹಾಗಾಗಿ ಅಮಲು ವ್ಯಸನಗಳ ದಾಸರಾಗಿ ಮತ್ತೆ ಮಾರಣಾಂತಿಕ ರೋಗದಿಂದ ಮುಕ್ತರಾಗಲು ಚಡಪಡಿಸುವುದಕ್ಕಿಂತ ಅಂತಹ ವ್ಯಸನಗಳತ್ತ ವಾಲದಂತೆ ನೋಡಿಕೊಳ್ಳುವುದು ಮುಖ್ಯ ಎಂದು ಕ್ಷೇಮ ಡೀನ್ ಪ್ರೊ. ಡಾ. ಸತೀಶ್ ಭಂಡಾರಿ ಹೇಳಿದರು.
  ನಿಟ್ಟೆ ವಿವಿ ಕುಲಸಚಿವ ಪ್ರೊ.ಡಾ. ಎಂ.ಎಸ್. ಮೂಡಿತ್ತಾಯ ಹಾಗೂ ಕ್ಷೇಮ ವೈದ್ಯಕೀಯ ಅದೀಕ್ಷಕಿ ಡಾ. ಕರುಣಾ ರಮೇಶ್ ಉಪಸ್ಥಿತರಿದ್ದರು.
 ಕಾರ್ಯಕ್ರಮದಲ್ಲಿ ಕ್ಷೇಮದಿಂದ ಚಿಕಿತ್ಸೆ ಪಡೆದು ಅಮಲು ವ್ಯಸನ ಮುಕ್ತಗೊಳಿಸುವಲ್ಲಿ ಸೇವೆ ಸಲ್ಲಿಸಿದವರನ್ನು ಹಾಗೂ ಪಾನಮುಕ್ತರಾದ ಮುಕ್ತರಾದ ವ್ಯಸನಿಗಳನ್ನು ಸನ್ಮಾನಿಸಲಾಯಿತು.
 ಮನಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಡಾ. ಸತೀಶ್ ರಾವ್ ಸ್ವಾಗತಿಸಿದರು. ಡಾ. ವಿಶಾಲ್ ನಿಟ್ಟೆ ವಿವಿಯ ಕ್ಷೇಮ ಮೆಡಿಕಲ್ ಅಕಾಡೆಮಿಯ ಮನಶಾಸ್ತ್ರ ವಿಭಾಗದಲ್ಲಿ ನೀಡುತ್ತಿರುವ ಚಿಕಿತ್ಸೆ ಹಾಗೂ ಸೌಲಭ್ಯಗಳ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಸಂತೋಷ್ ಪ್ರಭು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News