×
Ad

ಸುಳ್ಯ: ಪರೀಕ್ಷೆ ಮುಂದೂಡಿ ನಡೆಯಿತು ಮಕ್ಕಳ ಹಬ್ಬ !

Update: 2016-03-04 18:27 IST

ಸುಳ್ಯ: ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಬಾಲ ವಿಕಾಸ ಅಕಾಡೆಮಿ ಜಿಲ್ಲಾ ಕಾರ್ಯನುಷ್ಠಾನ ಸಮಿತಿ ಹಾಗೂ ಸಾರ್ವಜಿನಕ ಶಿಕ್ಷಣ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಶುಕ್ರವಾರ ಸುಳ್ಯದ ಕೆವಿಜಿ ಪುರಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮವು ಅನೇಕ ಮಕ್ಕಳ ವಾರ್ಷಿಕ ಪರೀಕ್ಷೆಯನ್ನೇ ಕಸಿಯಿತು.

ಗಡಿಬಿಡಿ ಕಾರ್ಯಕ್ರಮ:
   
ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಮಾಡಿದರೆ ಗ್ರಾಮೀಣ ಪ್ರದೇಶದ ಮಕ್ಕಳು ಇದರಿಂದ ವಂಚಿತರಾಗುತ್ತಾರೆ ಎಂಬ ಕಾರಣದಿಂದ ತಾಲೂಕು ಕೇಂದ್ರದಲ್ಲಿ ಈ ಹಬ್ಬವನ್ನು ಆಯೋಜನೆ ಮಾಡಲಾಗಿತ್ತು. ವಾಸ್ತವವಾಗಿ ಈ ಮಕ್ಕಳ ಹಬ್ಬ 1 ತಿಂಗಳ ಮೊದಲೇ ನಡೆಯಬೇಕಿತ್ತು. ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಗಿತ್ತು. ಹೀಗಾಗಿ ಕೊನೆ ಕ್ಷಣದಲ್ಲಿ ಡೇಟ್ ಫಿಕ್ಸ್ ಆಗಿ ಶುಕ್ರವಾರಕ್ಕೆ ನಿಗದಿಯಾಗಿತ್ತು. ಅತಿಥಿಗಳಿಗೆ, ಪತ್ರಕರ್ತರಿಗೆ ಇದರ ಆಮಂತ್ರಣ ಪತ್ರ ತಲುಪಿದ್ದು ಗುರುವಾರ ಸಂಜೆ. ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಬೇಕಿತ್ತು. ಆಮಂತ್ರಣ ಪತ್ರದಲ್ಲಿ ಹೆಸರು ಇರುವ 24 ಅತಿಥಿಗಳ ಪೈಕಿ ಆ ಸಮಯಕ್ಕೆ ಒಬ್ಬರೂ ಬಂದಿರಲಿಲ್ಲ. ಸುಳ್ಯ ನಗರದ ನಾಲ್ಕೈದು ಪ್ರೌಢಶಾಲೆಗಳಿಂದ ಶಿಕ್ಷಣ ಇಲಾಖೆ ಸೂಚನೆಯಂತೆ ವಿದ್ಯಾರ್ಥಿಗಳು ಬಂದಿದ್ದರು. ಈ ಸೂಚನೆಯೂ ಶಾಲೆಗಳಿಗೆ ಬಂದದ್ದು ಶುಕ್ರವಾರ ಬೆಳಿಗ್ಗೆಯಷ್ಟೇ. 11 ಗಂಟೆಯ ವೇಳೆಗೆ ನ.ಪಂ. ಅಧ್ಯಕ್ಷ ಪ್ರಕಾಶ್ ಹೆಗ್ಡೆಯವರು ಆಗಮಿಸಿದ ಬಳಿಕ ಕಾರ್ಯಕ್ರಮ ಆರಂಭಗೊಂಡಿತು. ಸುಳ್ಯ ಸೇರಿದಂತೆ ಐದು ಕ್ಷೇತ್ರಗಳ ಶಾಸಕರು, ಮೂವರು ಸಚಿವರು, 4 ವಿಧಾನ ಪರಿಷತ್ ಸದಸ್ಯರು,, ಸಂಸದರು, ಬಾಲವಿಕಾಸ ಅಕಾಡೆಮಿ, ಸಮಾಜ ಕಲ್ಯಾಣ ಮಂಡಳಿ, ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲಕ್ಕೂ ಮಿಗಿಲಾಗಿ ಬಾಲವಿಕಾಸ ಅಕಾಡೆಮಿಯ ಕಾರ್ಯನುಷ್ಠಾನ ಸಮಿತಿ ಸದಸ್ಯರು ಕಾರ್ಯಕ್ರಮಕ್ಕೆ ಸುಳಿಯಲೇ ಇಲ್ಲ. ಅಥವಾ ಕೇವಲ ಪ್ರೊಟೋಕಾಲ್ ಪ್ರಕಾರ ಅವರ ಹೆಸರು ಮುದ್ರಿತವಾಗಿತ್ತು!

ಕಷ್ಟ ಅನುಭವಿಸಿದ ಮಕ್ಕಳು:

   ಮಕ್ಕಳ ಹಬ್ಬಕ್ಕೆ ಜಿಲ್ಲೆಯಾದ್ಯಂತ ಸುಮಾರು 250 ಮಂದಿ ಆಗಮಿಸಿ ತಮ್ಮ ಪ್ರತಿಭಾ ಪ್ರದರ್ಶನ ನಡೆಸಬೇಕಿತ್ತು. ಕಡಬದ ಶಾಲೆಯೊಂದರ ಹೊರತಾಗಿ ಸುಳ್ಯದ ಹೊರಗಿನವರ್ಯಾರೂ ಬಂದಿರಲಿಲ್ಲ. ಸುಳ್ಯ ನಗರದ ವಿವಿಧ ಶಾಲೆಗಳಿಂದ ಸುಮಾರು 700 ರಷ್ಠು ವಿದ್ಯಾರ್ಥಿಗಳು ಬಂದಿದ್ದರು. ಬಂದ ವಿದ್ಯಾರ್ಥಿಗಳಲ್ಲಿಯೇ ಪ್ರತಿಭಾ ಪ್ರದರ್ಶನಕ್ಕೆ ಹೆಸರು ನೋದಾವಣೆ ಮಾಡಲಾಯಿತು. ಹಾಲ್ ಭರ್ತಿಯಾದಾಗ ಉಳಿದ ಮಕ್ಕಳು ನಿಲ್ಲಬೇಕಾಯಿತು. ಬಂದ ವಿದ್ಯಾರ್ಥಿಗಳಿಗೆ ತಮ್ಮ ಶಾಲೆಯಲ್ಲಿ ಬಿಸಿಯೂಟ ವ್ಯವಸ್ಥೆ ಮಾಡಲಾಗಿರಲಿಲ್ಲ. ಇತ್ತ ಮಕ್ಕಳ ಹಬ್ಬದಲ್ಲಿ ಇಷ್ಟು ಸಂಖ್ಯೆಯ ಮಕ್ಕಳಿಗೆ ಊಟದ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಹಾಗಾಗಿ ಮಧ್ಯಾಹ್ನ ಊಟಕ್ಕೂ ಕತ್ತರಿ ಬೀಳುವ ಸ್ಥಿತಿ ಇತ್ತು. ಕೊನೆ ಕ್ಷಣದಲ್ಲಿ ಊಟದ ವ್ಯವಸ್ಥೆಯನ್ನಂತೂ ಮಾಡಲಾಯಿತು.ಎಂದಿನಂತೆ ಸುಳ್ಯದಲ್ಲಿ ವಿದ್ಯುತ್ ನಾಪತ್ತೆಯಾಗಿತ್ತು. ಪುರಭವನದಲ್ಲಿ ಕುಳಿತ ಮಕ್ಕಳ ಸ್ಥಿತಿಯಂತೂ ದೇವರಿಗೇ ಪ್ರೀತಿ.

ಪರೀಕ್ಷೆ ಇಲ್ಲ:
 ಇವೆಲ್ಲಕ್ಕಿಂತ ಗಂಭೀರ ವಿಷಯವೆಂದರೆ ಬಂದ ಬಹುತೇಕ ಶಾಲಾ ವಿದ್ಯಾರ್ಥಿಗಳಿಗೆ ಶುಕ್ರವಾರ ವಾರ್ಷಿಕ ಪರೀಕ್ಷೆ ಇತ್ತು. ಮಕ್ಕಳ ಹಬ್ಬಕ್ಕೆ ಬರಬೇಕಾದ ಕಾರಣದಿಂದ ಇಂತಹ ಶಾಲಾ ಪರೀಕ್ಷೆಯನ್ನು ಮುಂದೂಡಲಾಯಿತು. ಇದಕ್ಕೆ ಶಿಕ್ಷಣ ಇಲಾಖೆಯ ಸಮಜಾಯಿಷಿಕೆ ಬೇರೆಯೇ ಇತ್ತು.
ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾಗಬೇಕಾದ ಉತ್ತಮ ಕಾರ್ಯಕ್ರಮವೊಂದು ಅಕಾಡೆಮಿ ಮತ್ತು ಇಲಾಖೆಯ ಅಸಮರ್ಪಕ ಕಾರ್ಯದಕ್ಷತೆಯಿಂದ ಕಾಟಾಚಾರಕ್ಕೆ ನಡೆಯುವುವಂತಾಯಿತು.

ಉದ್ಘಾಟನೆ:

 ಪಯಸ್ವಿನಿ ಸ್ತ್ರೀ ಶಕ್ತಿ ಸೊಸೈಟಿ ಅಧ್ಯಕ್ಷೆ ಉಷಾ ಜಯರಾಮ್ ಕಾಯಕ್ರಮ ಉದ್ಘಾಟಿಸಿ ಮಕ್ಕಳ ಭಾಗೀದಾರಿಕೆಯಿಂದ ಮಕ್ಕಳ ಹಬ್ಬ ಯಶಸ್ವಿಯಾಗಲಿ ಎಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಮಾತನಾಡಿ ಮಕ್ಕಳ ಪ್ರತಿಭಾ ವಿಕಸನಕ್ಕೆ ಇಂತಹ ಕಾರ್ಯಕ್ರಮಗಳು ಪೂರಕ ಎಂದು ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಪುರುಷೋತ್ತಮ, ಶಿಕ್ಷಣ ಸಂಯೋಜಕ ಪದ್ಮನಾಭ ಅತ್ಯಾಡಿ ವೇದಿಕೆಯಲ್ಲಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಉಸ್ಮಾನ್ ಸ್ವಾಗತಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಪ್ರಸ್ತಾವನೆಗೈದರು. ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಕನ್ಯಾ ವಂದಿಸಿದರು. ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News