ಮಂಗಳೂರು : ಕಣ್ಮನ ಸೆಳೆವ ಆಲಂಕಾರಿಕ ಮೀನುಗಳು!
ಮಂಗಳೂರು, ಮಾ. 4: ನಗರದ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಇಂದು ಆರಂಭಗೊಂಡ ಭಾರತದ ಅತಿ ದೊಡ್ಡ ಮೀನು ಹಬ್ಬ ‘ಮತ್ಸ ಮೇಳ’ ಕಣ್ಮನ ಸೆಳೆವ ಆಲಂಕಾರಿಕ ಮೀನುಗಳ ಬೃಹತ್ ಪ್ರದರ್ಶನ ಹಾಗೂ ಅಪರೂಪದ ಮೃದ್ವಂಗಿಗಳ ವಿರಾಟ್ ದರ್ನಕ್ಕೆ ವೇದಿಕೆಯಾಗಿ ಪರಿಣಮಿಸಿದೆ.
ಅಲಂಕಾರಿಕ ಮೀನುಗಳ ಪ್ರದರ್ಶನ ವಿಭಾಗದಲ್ಲಿ ಬೃಹದಾಕಾರದ ಮೊಸಳೆಯನ್ನು ಹೋಲುವ ‘ಅಲಿಗೇಟರ್ ಗಾರ್ಗ್’ ಹೆಸರಿನ ಮೀನು ಗಮನ ಸೆಳೆಯುತ್ತಿದ್ದರೆ, ರೆಡ್ ಕ್ಯಾಪ್ ರಾಂಚು ಗೋಲ್ಡ್ ಫಿಶ್, ರೆಡ್ ಪ್ಯಾರೆಟ್ ಬಿಗ್, ಆಸ್ಕರ್, ಪರ್ಲ್ ಸೀಲ್ ಗೋಲ್ಡ್, ಟೈಗರ್ ಚಿಲಿ ರೆಡ್ ಆಸ್ಕರ್, ಫಿಲಮೆಂಟ್ ಬಾರ್ಬ್, ಜೈಟ್ ಡಾನಿಯೋ, ಬ್ಲೂ ಸ್ಪಾಟೆಡ್ ಹಿಲ್ ಟ್ರೌಟ್, ಪರ್ಲ್ ಅರೋವನಾ, ಒರಾಂಡ, ಬರಿಲಿಯಾಸ್ ಕನರೆನ್ಸಿಸ್, ರೆಡ್‌ಲೈನ್ ಟಾರ್ಸೆಡೊ, ಲಯನ್ ಹೆಡ್ ಗೋಲ್ಡ್, ಬ್ಲೂ ಗೌರಾ ಬಿಗ್, ರೆಡ್ ಆ್ಯಂಡ್ ವೈಟ್ ಟೇಲ್ ಪ್ಲಾಟಿ, ಅಲ್ಬಿನಿ ಕ್ಯಾಟ್ ಫಿಶ್, ರೆಡ್ ಟೇಲ್ ಗಪ್ಪೀಸ್ ಸೇರಿದಂತೆ ವಿಭಿನ್ನ ರೂಪ, ಆಕಾರ, ಬಣ್ಣಗಳ ಮೀನುಗಳು 100ಕ್ಕೂ ಅಧಿಕ ಅಕ್ವೇರಿಯಂಗಳಲ್ಲಿ ಪ್ರದರ್ಶಿಸಲ್ಪಡುತ್ತಿದೆ.
ಮೀನು ಹಬ್ಬಕ್ಕೆ ಮೆರುಗು ತುಂಬಿದ ಮೃದ್ವಂಗಿಗಳ ಪ್ರದರ್ಶನ
ಮೀನು ಹಬ್ಬದಲ್ಲಿ ಕೇರಳದ ಅಲೆಪ್ಪಿಯ ಫಿರೋಜ್ ಅಹ್ಮದ್‌ರವರು ಸಂಗ್ರಹಿಸಿರುವ 500ಕ್ಕೂ ಅಧಿಕ ತಳಿಗಳ 1000ಕ್ಕೂ ಅಧಿಕ ಮೃದ್ವಂಗಿಗಳ (ಚಿಪ್ಪು) ಪ್ರದರ್ಶ ನೋಡುಗರನ್ನು ಆಕರ್ಷಿಸುತ್ತಿದೆ.
ಕಳೆದ 19 ವರ್ಷಗಳಿಂದ ಮೃದ್ವಂಗಿಗಳ ಸಂಗ್ರಹ ಮತ್ತು ಪ್ರದರ್ಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ 34ರ ಹರೆಯದ ಫಿರೋಜ್ ಅಹ್ಮದ್,. ಕೇರಳದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ವನಮಿತ್ರ ಅವಾರ್ಡ್ 2016ಗೆ ಇವರು (ಅತ್ಯುತ್ತಮ ಪರಿಸರ ಸಂರಕ್ಷಕ) ಆಯ್ಕೆಯಾಗಿದ್ದಾರೆ.
ಸಿಲಿಕಾ ರೇಡಿಯೇಟಾ (ಸೂರ್ಯಾಸ್ತವನ್ನು ಹೋಲುವ ಚಿಪ್ಪು), ಎಲಿಫೆಂಟ್ ಟೂತ್ (ಆನೆಯ ದಂತಾಕೃತಿ), ಇಂಡಿಯನ್ ಟಿಬಿಯಾ ಮೊದಲಾದ ಅಪರೂಪದ ತಳಿಗಳ ಮೃದ್ವಂಗಿಗಳು ಇವರ ಸಂಗ್ರಹದಲ್ಲಿದೆ. ವೆಲ್ಕ್ ಹೆಸರಿನ ಚಿಪ್ಪು ಇವರ ಸಂಗ್ರಹದಲ್ಲಿರುವ ಅತೀ ದೊಡ್ಡ ಮೃದ್ವಂಗಿಯಾಗಿದ್ದರೆ, ನೆಸಾರಿಯಸ್ ಪಿಕ್ವಸ್ ಅತೀ ಸಣ್ಣ ಚಿಪ್ಪಾಗಿದೆ.
ಇದರ ಜತೆಗೆ ಮೀನು ಹಬ್ಬದಲ್ಲಿ ಟ್ರಾಲರ್ ಬೋಟ್, ಪರ್ಸಿನ್ ಬೋಟು, ಗಿಲ್‌ನೆಟ್ ದೋಣಿ ಮಾದರಿಯು ಪ್ರದರ್ಶನವಿದೆ. ಬೆಂಗಳೂರು, ಮಂಗಳೂರು, ಬೀದರ್, ಅಂಕೋಲ, ವಿಜಯಪುರದ ಸಂಶೋಧನಾ ಮಾಹಿತಿ ಕೇಂದ್ರಗಳು ಇಲ್ಲಿ ಮೀನುಗಾರಿಕೆ ಕುರಿತಂತೆ ಪೂರಕ ಮಾಹಿತಿ ನೀಡುತ್ತಿವೆ. ಮೀನು ಸಾಕಾಣಿಯಲ್ಲಿ ಉಪ ಉತ್ಪನ್ನಗಳ ಬಳಕೆಯ ಬಗ್ಗೆಯೂ ಇಲ್ಲಿ ಮಾಹಿತಿ ನೀಡಲಾಗುತ್ತದೆ.
ಕೆಎಫ್‌ಡಿಸಿ ವತಿಯಿಂದ ಅಲಂಕಾರಿಕ, ತಾಜಾ ಹಾಗೂ ಮೌಲ್ಯವರ್ಧಿತ ಮೀನು ಉತ್ಪನ್ನಗಳ ಮಾರಾಟ ಮಳಿಗೆಯು ಪ್ರದರ್ಶನದಲ್ಲಿದೆ.
ಇಂದು ಉದ್ಘಾಟನೆಗೊಂಡ ಮತ್ಸ ಮೇಳ ಮಾ.6ರವರೆಗೆ ಇದು ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.