ಮಾ.6-7: ಪುತ್ತೂರು ಕೋಟಿ ಚೆನ್ನಯ ಜೋಡುಕತೆ ಕಂಬಳ
ಪುತ್ತೂರು: ಪುತ್ತೂರಿನ ಇತಿಹಾಸ ಪ್ರಸಿದ್ದ 24ನೇ ವರ್ಷದ ಹೊನಲು ಬೆಳಕಿನ ಕೋಟಿಚೆನ್ನಯ ಜೋಡುಕರೆ ಕಂಬಳ ಮಾ.6 ಮತ್ತು 7ರಂದು ಪುತ್ತೂರು ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ತಿಳಿಸಿದ್ದಾರೆ. ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಯಕರ್ನಾಟಕ ಸಂಸ್ಥಾಪಕ ಎನ್. ಮುತ್ತಪ್ಪ ರೈ ಅವರ ಸಾರಥ್ಯದಲ್ಲಿ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರ ಗೌರವ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಂಬಳದಲ್ಲಿ ಸುಮಾರು 150 ಜೋಡಿಗೂ ಅಧಿಕ ಕೋಣಗಳು ಭಾಗವಹಿಸಲಿವೆ ಎಂದರು.
ಮಾ. 6ರಂದು ಪೂರ್ವಾಹ್ನ ಪುತ್ತೂರು ಮಹಾಲಿಂಗೇಶ್ವರ ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಸಮಾರಂಭ ಉದ್ಘಾಟಿಸಲಿದ್ದಾರೆ. ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂದು ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ವಿನಯ ಕುಮಾರ್ ಸೊರಕೆ ವಹಿಸಲಿದ್ದಾರೆ. ಅತಿಥಿಗಳಾಗಿ ಸಚಿವರಾದ ಬಿ. ರಮಾನಾಥ ರೈ, ವಿನಯ ಕುಲಕರ್ಣಿ, ಅಭಯಚಂದ್ರ ಜೈನ್, ಶಾಸಕಿ ಶಕುಂತಳಾ ಶೆಟ್ಟಿ, ಪ್ರಮೋದ್ ಮದ್ವರಾಜ್, ವಸಂತ ಬಂಗೇರಾ, ಪ್ರತಾಪಚಂದ್ರ ಶೆಟ್ಟಿ, ಜೆ.ಆರ್. ಲೋಭೋ, ಐವನ್ ಡಿ’ಸೋಜ, ಮೊಯ್ದಿನ್ ಬಾವಾ ಮತ್ತಿತರರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಧರ್ಮಗುರು ಡಾ. ಗೀವರ್ಗೀಸ್ ಮಾರ್ ದಿವಾನ್ಸಿಯಸ್, ಸುಧಾಕರ ಶೆಟ್ಟಿ ಮೊಗೆರೋಡಿ ಮತ್ತು ಕನ್ನಿಕಾ ಅಡಪ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಮಾ.7ರಂದು ಬಹುಮಾನ ವಿತರಣೆ ನಡೆಯಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ವಹಿಸಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ರಂಗಿತರಂಗ ಸಿನಿಮಾದ ನಾಯಕ ನಟ ನಿರೂಪ್ ಭಂಡಾರಿ, ಫಸ್ಟ್ ರ್ಯಾಂಕ್ ರಾಜು ಸಿನಿಮಾದ ನಾಯಕ ನಟ ರಘುನಂದನ್ ಮತ್ತು ನಾಯಕಿ ನಟಿಯರಾದ ಅಪೂರ್ವ ಮತ್ತು ತನಿಷ್ಕಾ ಕಪೂರ್ ಭಾಗವಹಿಸಲಿದ್ದಾರೆ. ವಿಶೇಷ ಬೆಡಿ ಪ್ರದರ್ಶನವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಸಂಚಾಲಕ ಎನ್. ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನಾರ್ಶ ಕುಲಾಲ್ ಪಿ.ವಿ. ಕೋಶಾಧಿಕಾರಿ ಪ್ರಸನ್ನ ಶೆಟ್ಟಿ ಪಿ.ಎನ್, ಸದಸ್ಯ ನಿರಂಜನ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.