ಮಂಗಳೂರು: ಮಹಾಕಾಳಿ ಪಡ್ಪು ರೈಲ್ವೆಗೇಟ್ ಬಳಿ ಟ್ರಾಫಿಕ್ ಸಮಸ್ಯೆ ನಿವಾರಿಸುತ್ತಿರುವ ಸ್ವಯಂಸೇವಕರು
ಮಂಗಳೂರು,ಮಾ.4: ನಗರದ ಮೋರ್ಗನ್‌ಗೇಟ್ ಸಮೀಪದ ಮಹಾಕಾಳಿಪಡ್ಪು ವಿನಲ್ಲಿರುವ ರೈಲ್ವೆಗೇಟ್ ನಿಂದಾಗಿ ವಾಹನಸವಾರರು ಪಡುತ್ತಿದ್ದ ಸಮಸ್ಯೆಗೆ ಸ್ಥಳೀಯ ಯುವಕರು ಪರಿಹಾರವನ್ನು ಕಂಡುಕೊಂಡಿದ್ದಾರೆ. ಮಹಾಕಾಳಿಪಡ್ಪು ರೈಲ್ವೇಗೇಟ್ ಹಾದು ಹೋಗುವುದೆಂದರೆ ವಾಹನ ಸವಾರರಿಗೆ ಸಾಹಸ ಮಾಡುವ ಪರಿಸ್ಥಿತಿ ಇತ್ತು.
ರೈಲ್ವೇ ಗೇಟ್ ಹಾಕಿದ ಸಂದರ್ಭ ವಾಹನಗಳು ರಸ್ತೆಯ ಎರಡು ಬದಿಯಲ್ಲಿ ಸಾಲುಗಟ್ಟಲೆ ರಸ್ತೆಯಲ್ಲಿ ನಿಂತುಕೊಳ್ಳುತ್ತಿದ್ದವು. ಇದರಿಂದ ಗೇಟ್ ತೆರೆಯುವ ವೇಳೆ ಎದುರು ಗಡೆಯಿಂದ ಬರುವ ವಾಹನಗಳಿಗೆ ಸರಾಗವಾಗಿ ಹೋಗಲು ಸಂಕಷ್ಟವುಂಟಾಗುತ್ತಿತ್ತು.
ಈ ರೈಲ್ವೆ ಹಾದಿಯಲ್ಲಿ ದಿನಂಪ್ರತಿ ಸುಮಾರು 50 ರೈಲುಗಳು ಓಡಾಟ ನಡೆಸುತ್ತಿರುವುದರಿಂದ ಅಷ್ಟು ಬಾರಿಯೂ ರೈಲ್ವೆಗೇಟ್ ಬೀಳುತ್ತಿದೆ. ಈ ರೈಲ್ವೆ ಗೇಟ್‌ನಲ್ಲಿ ಬಂದು ನಿಂತಾಗ ರೈಲ್ವೆ ಗೇಟ್ ಬಿದ್ದ ಸಂದರ್ಭದಲ್ಲಿ ಹೆಚ್ಚಿನ ವಾಹನಸವಾರರು ಗೇಟ್ ತೆರೆದ ಕೂಡಲೆ ತಾವೇ ಮೊದಲನೆಯದಾಗಿ ಇತರರನ್ನು ಹಿಂದಿಕ್ಕಿ ಹೋಗಬೇಕಲೆಂಬ ಧಾವಂತದಿಂದ ವಾಹನ ಚಲಾಯಿಸಲು ಅವಸರಿಸುವುದರಿಂದ ಸಾಕಷ್ಟು ಸಮಸ್ಯೆಯುಂಟಾಗಿತ್ತು. ವಾಹನ ಸ್ಪರ್ಧೆಯಲ್ಲಿ ಭಾಗವಹಿಸುವ ರೀತಿಯಲ್ಲಿ ವಾಹನಸವಾರರು ಇತರರನ್ನು ಹಿಂದಿಕ್ಕಲು ಅಡ್ಡಾದಿಡ್ಡಿಯಾಗಿ ಸಂಚರಿಸಿ ಸುಗಮ ಸಂಚಾರಕ್ಕೆ ತಡೆಯೊಡ್ಡುತ್ತಿದ್ದರು.
ಈ ಕಾರಣದಿಂದಲೆ ರೈಲ್ವೆ ಗೇಟ್ ಬಳಿ ಗೇಟ್ ಹಾಕಿದ ಸಂದರ್ಭದಲ್ಲಿ ಬರುವುದೆಂದರೆ ಜನರ ಮುಖದಲ್ಲಿ ಭಾರಿ ಅಸಹನೆ ಕಂಡುಬರುತ್ತಿರುತ್ತದೆ.
ವಾಹನ ಸವಾರರ ಈ ಸಂಕಷ್ಟಕ್ಕೆ ಸ್ಥಳೀಯ ಯುವಕರ ತಂಡ ಹೊಸದೊಂದು ಪರಿಹಾರ ಕಂಡುಹುಡುಕಿದೆ. ಇಲ್ಲಿ ಪೊಲೀಸರ ನಿಯೋಜನೆ ಮಾಡಲು ವಿನಂತಿಸಿದರೂ ಪೊಲೀಸ್ ಇಲಾಖೆ ಮುತುವರ್ಜಿ ವಹಿಸದೆ ಇರುವುದರಿಂದ ಸ್ಥಳೀಯ ಯುವಕರೆ ಟ್ರಾಫಿಕ್ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ.
ಜೆಪ್ಪು ಮಹಾಕಾಳಿಪಡ್ಪುವಿನ ಸುಮಾರು 40 ಮಂದಿ ಯುವಕರು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8.30ರವರೆಗೆ ಸ್ವಪ್ರೇರಣೆಯಿಂದ ಸುಗಮಸಂಚಾರಕ್ಕೆ ಬೇಕಾದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಸುಮಾರು 8 ಸಂಘಸಂಸ್ಥೆಗಳು ಯುವಕರ ಕೆಲಸಕ್ಕೆ ಕೈಜೋಡಿಸಿದ್ದಾರೆ. ಎರಡು ಕಡೆಯಲ್ಲಿಯೂ ವಾಹನಗಳನ್ನು ಒಂದೆ ಸಾಲಿನಲ್ಲಿ ನಿಲ್ಲಿಸಿ ಗೇಟ್ ತೆರೆದ ಕೂಡಲೆ ವಾಹನಗಳು ಸರಾಗವಾಗಿ ಹೋಗುವ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿದ್ದಾರೆ.
ಇಲ್ಲಿ ಸುಗಮ ಸಂಚಾರಕ್ಕೆ ಸ್ವಪ್ರೇರಿತರಾಗಿ ಕೆಲಸ ಮಾಡುತ್ತಿರುವ ಯುವಕರು ಬೇರೆ ಬೇರೆ ಉದ್ಯೋಗದಲ್ಲಿರುವವರು.ತಮ್ಮ ಕೆಲಸವನ್ನು ಮುಗಿಸಿದ ನಂತರ ಯುವಕರು ರೈಲ್ವೆ ಗೇಟ್‌ನಲ್ಲಿ ಟ್ರಾಫಿಕ್ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸ್ಥಳೀಯ ಯುವಕರ ಈ ಸೇವೆ ಪ್ರಯಾಣಿಕರ, ಸಾರ್ವಜನಿಕ ಶ್ಲಾಘನೆಗೂ ಪಾತ್ರವಾಗಿದೆ.
-------------------
ಇತ್ತೀಚೆಗೊಂದು ಆ್ಯಂಬುಲೆನ್ಸ್‌ಗೆ ಗೇಟ್ ತೆರೆದು ಹತ್ತು ನಿಮಿಷವಾದರೂ ಅಡ್ಡಾದಿಡ್ಡಿ ವಾಹನಗಳ ಸಂಚಾರದಿಂದ ಹೋಗಲು ಸಾಧ್ಯವಾಗಿರಲಿಲ್ಲ. ಇದನ್ನು ಗಮನಿಸಿದ ನಂತರ ನಾವು ಸ್ಥಳೀಯರೆಲ್ಲರೂ ಸೇರಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ನಿರ್ಧರಿಸಿ ಈ ಕೆಲಸ ಮಾಡುತ್ತಿದ್ದೇವೆ.
-ನವಾಜ್, ಟ್ರಾಫಿಕ್ ಸ್ವಯಂಸೇವಕರು.
------------
ವಾಹನಗಳ ಅಡ್ಡಾದಿಡ್ಡಿಯಿಂದ ಸಾರ್ವಜನಿಕರು ಪರದಾಡುತ್ತಿದ್ದರೆ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲು ಸಾಧ್ಯವಾಗದೆ ಸಂಕಷ್ಟ ಪಡುತ್ತಿದ್ದರು. ಇದೀಗ ಈ ಸಮಸ್ಯೆ ಪರಿಹಾರವಾಗಿದೆ.
- ದಿನೇಶ್ ಕರ್ಕೇರಾ, ಟ್ರಾಫಿಕ್ ಸ್ವಯಂಸೇವಕರು.
------------ ಈ ರೀತಿ ವಾಹನಗಳ ನಿಯಂತ್ರಣ ಮಾಡಿರುವುದರಿಂದ ತುಂಬಾ ಒಳ್ಳೆಯದಾಗಿದೆ. ದೊಡ್ಡ ವಾಹನಗಳನ್ನು ಹಿಂದಿಕ್ಕಿ ಸಣ್ಣ ಸಣ್ಣ ವಾಹನಗಳು ಅಡ್ಡಾದಿಡ್ಡಿ ಚಲಿಸುವುದರಿಂದ ದೊಡ್ಡ ವಾಹನಗಳು ಗೇಟ್ ದಾಟಲು ಪರದಾಡಬೇಕಾಗಿತ್ತು. ಇದರಿಂದ ದೊಡ್ಡ ವಾಹನಗಳ ಹಿಂದೆ ಇರುವ ಹಲವು ವಾಹನಗಳಿಗೆ ಸಮಸ್ಯೆಯಾಗಿತ್ತು. ಯುವಕರ ತಂಡ ಉತ್ತಮ ಕೆಲಸ ಮಾಡುತ್ತಿದೆ.
ಸುರೇಂದ್ರ, ಲಾರಿ ಚಾಲಕ
---------------
ನಾನು ಖಾಸಗಿ ಆಸ್ಪತ್ರೆಯಲ್ಲಿ ಎಕ್ಸ್‌ರೇ ಡಿಪಾರ್ಟ್‌ಮೆಂಟ್‌ನಲ್ಲಿ ಉದ್ಯೋಗದಲ್ಲಿದ್ದೇನೆ. ತುರ್ತು ಕರೆಯ ಮೇಲೆ ಆಸ್ಪತ್ರೆಗೆ ಹೋಗಬೇಕಿದ್ದರೆ ಇಲ್ಲಿನ ಅವ್ಯವಸ್ಥೆಯಿಂದ ಭಾರಿ ಸಮಸ್ಯೆಯುಂಟಾಗಿತ್ತು. ಯುವಕರ ತಂಡ ಮಾಡುತ್ತಿರುವ ಜನಸೇವೆಯಿಂದ ಇದೀಗ ಸಮಸ್ಯೆ ಬಗೆಹರಿದಿದೆ.
- ರೂಪ, ದ್ವಿಚಕ್ರ ವಾಹನ ಸವಾರೆ
----------------
ಗೇಟ್ ತೆರೆದ ಕೂಡಲೆ ಮುಂದೆ ಹೋದರೆ ಎದುರಿನಿಂದ ಬರುವ ವಾಹನಗಳಿಂದ ಸಮಸ್ಯೆಯಾಗಿತ್ತು. ತುರ್ತು ಕೆಲಸಕ್ಕೆ ಹೋಗುವವರು ಸಮಸ್ಯೆಗೀಡಾಗಿದ್ದರು. ಯುವಕರ ತಂಡದ ಕೆಲಸಕ್ಕೆ ಕೃತಜ್ಞತೆಗಳು.
- ಇಸ್ಮಾಯಿಲ್, ಬೈಕ್ ಸವಾರ