ಐಎಸ್‌ಎಸ್‌ಎಫ್ ವಿಶ್ವಕಪ್: ಶೂಟರ್ ಜಿತು ರಾಯ್‌ಗೆ ಚಿನ್ನ
ಬ್ಯಾಂಕಾಂಗ್,ಮಾ.4: ಚೀನಾದ ಮಾಜಿ ಒಲಿಂಪಿಕ್ ಚಾಂಪಿಯನ್ ಪಾಂಗ್ ವೀ ಅವರನ್ನು ಮಣಿಸಿದ ಭಾರತದ ಸ್ಟಾರ್ ಶೂಟರ್ ಜಿತು ರಾಯ್ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಶುಕ್ರವಾರ ನಡೆದ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ರಾಯ್ 191.3 ಅಂಕವನ್ನು ಗಳಿಸಿ ಮೊದಲ ಸ್ಥಾನ ಪಡೆದರು. ರಾಯ್ ಪ್ರತಿಸ್ಪರ್ಧಿ ಚೀನಾದ ವೀ 186.5 ಅಂಕವನ್ನು ಗಳಿಸಿದ್ದಾರೆ.
ಚೀನಾದ ಇನ್ನೋರ್ವ ಶೂಟರ್ ವಾಂಗ್ ಝಿವೀ ಅಂತಿಮ ಸುತ್ತಿನಲ್ಲಿ 165.8 ಅಂಕವನ್ನು ಗಳಿಸಿ ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅರ್ಹತಾ ಸುತ್ತಿನಲ್ಲಿ 549 ಅಂಕವನ್ನು ಗಳಿಸಿದ್ದ ಭಾರತದ ಇನ್ನೋರ್ವ ಶೂಟರ್ ಪ್ರಕಾಶ್ ನಂಜಪ್ಪ 17ನೆ ಸ್ಥಾನ ಪಡೆದರು.
ಅರ್ಹತಾ ಸುತ್ತಿನಲ್ಲಿ ಒಟ್ಟು 562 ಅಂಕವನ್ನು ಗಳಿಸಿದ್ದ ಜಿತು ಮೂರನೆ ಸ್ಥಾನಿಯಾಗಿ ಫೈನಲ್‌ಗೆ ಪ್ರವೇಶಿಸಿದ್ದರು. ಫೈನಲ್‌ನಲ್ಲಿ ಚೀನಾ ಶೂಟರ್‌ಗಳನ್ನು ಹಿಮ್ಮೆಟಿಸಿದ ಜಿತು ಚಿನ್ನದ ಪದಕವನ್ನು ಜಯಿಸಿದ್ದಾರೆ.
ಕಳೆದ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ್ದ ಜಿತು ಐಎಸ್‌ಎಸ್‌ಎಫ್ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದಲ್ಲದೆ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು.