‘ದ್ವೇಷಪೂರಿತ ದೃಷ್ಟಿ’ ಹೊಂದಿರುವ ಟ್ರಂಪ್
ವಾಶಿಂಗ್ಟನ್, ಮಾ. 4: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಆಗಿರುವ ಹಿಲರಿ ಕ್ಲಿಂಟನ್, ತನ್ನ ರಿಪಬ್ಲಿಕನ್ ಪ್ರತಿಸ್ಪರ್ಧಿಯ ‘‘ದ್ವೇಷಪೂರಿತ ದೃಷ್ಟಿ’’ಯನ್ನು ಖಂಡಿಸಿದ್ದಾರೆ ಹಾಗೂ ಈ ರಿಯಲ್ ಎಸ್ಟೇಟ್ ದೈತ್ಯ ‘‘ಭಯ ಹುಟ್ಟಿಸುತ್ತಾರೆ’’ ಎಂದಿದ್ದಾರೆ.
‘‘ಡೊನಾಲ್ಡ್ ಟ್ರಂಪ್ ಭಯ ಹುಟ್ಟಿಸುವ ಮನುಷ್ಯ ಎಂದು ನನಗನಿಸುತ್ತದೆ, ಅವರು ಯಾವುದನ್ನು ಪ್ರತಿಪಾದಿಸುತ್ತಾರೋ ಅದನ್ನು ನಾನು ದ್ವೇಷಿಸುತ್ತೇನೆ’’ ಎಂದು ತನ್ನ ಬೆಂಬಲಿಗರಿಗೆ ಕಳುಹಿಸಿದ ಇಮೇಲ್‌ನಲ್ಲಿ ಹಿಲರಿ ಹೇಳಿದ್ದಾರೆ.
2012ರ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮಿಟ್ ರಾಮ್ನಿ ತನ್ನದೇ ಪಕ್ಷದ ಮುಂಚೂಣಿಯ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ (ಟ್ರಂಪ್)ಯನ್ನು ಟೀಕಿಸಿದ ಗಂಟೆಗಳ ಬಳಿಕ ಹಿಲರಿ ಈ ಇಮೇಲ್ ಬರೆದಿದ್ದಾರೆ.
‘‘ಮಹಿಳೆಯರು, ಬಿಳಿಯೇತರರು ಹಾಗೂ ದೇಶಗಳನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಅವಮಾನಿಸುವ ಈ ವ್ಯಕ್ತಿಯನ್ನು ನಾನು ದ್ವೇಷಿಸುತ್ತೇನೆ. ಅಮೆರಿಕನ್ನರ ಮೇಲೆ ಪರಿಣಾಮ ಬೀರುವ ಸಂಕೀರ್ಣ ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿನ ಅವರ ಸಂಪೂರ್ಣ ವೈಫಲ್ಯವನ್ನು ನಾನು ದ್ವೇಷಿಸುತ್ತೇನೆ’’ ಎಂದು ಗುರುವಾರ ಬರೆದ ಇಮೇಲ್‌ನಲ್ಲಿ 68 ವರ್ಷದ ಹಿಲರಿ ಹೇಳಿದ್ದಾರೆ.
ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿಯನ್ನು ಸೋಲಿಸಬಲ್ಲ ಏಕೈಕ ವ್ಯಕ್ತಿ ತಾನು ಎಂಬುದಾಗಿ ಇದಕ್ಕೂ ಮೊದಲು 69 ವರ್ಷದ ಟ್ರಂಪ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.