ಹಳಿ ತಪ್ಪಿದ ರೈಲು: ಪ್ರಯಾಣಿಕರ ರಕ್ಷಣೆ
ಮಂಗಳೂರು, ಮಾ.4: ನಗರದ ಹೊಯ್ಗೆ ಬಝಾರ್‌ನ ಗೂಡ್‌ಶೆಡ್‌ನಲ್ಲಿ ರೈಲು ಬೋಗಿಯೊಂದು ಹಳಿ ತಪ್ಪಿ ಅದರಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸುವ ಸಲುವಾಗಿ ರೈಲ್ವೆ ‘ಬ್ರೇಕ್ ಡೌನ್’ ಸಿಬ್ಬಂದಿ ಬೋಗಿಯ ಮೇಲ್ಛಾವಣಿಯನ್ನೇ ಕೊರೆದು ಕಾರ್ಯಾಚರಣೆ ನಡೆಸಿದರು. ಮಗುಚಿ ಬಿದ್ದ ಬೋಗಿಯನ್ನು ಇಲೆಕ್ಟ್ರಾನಿಕ್ ಸಾಧನ ಬಳಸಿ ಎದ್ದು ನಿಲ್ಲಿಸುವ ಕಾರ್ಯ ನಡೆಸಿದರು. ಇದು ಇಂದು ರೈಲ್ವೆ ಬೋರ್ಡ್ ವತಿಯಿಂದ ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದ ಅಕಾರಿಗಳ ನೇತೃತ್ವದಲ್ಲಿ ನಡೆದ ಅಣಕು ಕಾರ್ಯಾಚರಣೆ. ರೈಲು ಹಳಿ ತಪ್ಪುವುದು, ಅಪಘಾತಕ್ಕೀಡಾಗುವುದು ಮೊದಲಾದ ಸಂದರ್ಭಗಳಲ್ಲಿ ತುರ್ತು ಪರಿಹಾರ ಕಾರ್ಯಕ್ರಮಗಳ ಕುರಿತು ಈ ಸಿಬ್ಬಂದಿಗೆ ತರಬೇತಿ ನೀಡುವ ಸಲುವಾಗಿ ಅಣಕು ಕಾರ್ಯಾಚರಣೆ ನಡೆಯಿತು. ನಿರುಪಯುಕ್ತ ರೈಲು ಬೋಗಿಯೊಂದನ್ನು ಗೂಡ್‌ಶೆಡ್ ಬಳಿ ಹಳಿ ತಪ್ಪಿಸಿ, ವಾಸ್ತವದಲ್ಲಿ ರೈಲು ಬೋಗಿಯೊಂದು ಹಳಿ ತಪ್ಪಿದರೆ ಯಾವ ರೀತಿಯಲ್ಲಿ ತುರ್ತು ಕಾರ್ಯಾಚರಣೆಯ ಮೂಲಕ ಪ್ರಯಾಣಿಕರ ಪ್ರಾಣ ಉಳಿಸಬಹುದು ಹಾಗೂ ರೈಲು ಬೋಗಿಯನ್ನು ಹಳಿಯಿಂದ ತೆರವುಗೊಳಿಸಿ ರೈಲು ಮಾರ್ಗವನ್ನು ಎಷ್ಟು ಕ್ಷಿಪ್ರವಾಗಿ ಸಂಚಾರಕ್ಕೆ ಯೋಗ್ಯಗೊಳಿಸಬಹುದು ಎಂಬ ಬಗ್ಗೆ ಎಆರ್‌ಟಿಯ 30 ಸಿಬ್ಬಂದಿಗೆ ತರಬೇತಿ ನೀಡಲಾಯಿತು ಎಂದು ಪಾಲ್ಘಾಟ್ ರೈಲ್ವೆಯ ಸಹಾಯಕ ಡಿವಿಜನಲ್ ಮೆಕ್ಯಾನಿಕಲ್ ಇಂಜಿನಿಯರ್ ಎಂ.ಕೆ.ಸುಬ್ರಹ್ಮಣ್ಯ ಮಾಹಿತಿ ನೀಡಿದರು. ಸುಬ್ರಹ್ಮಣ್ಯ ರೋಡ್, ಎಡಕುಮೇರಿ ಸಹಿತ ನಾನಾ ಭಾಗದಲ್ಲಿ ರೈಲು ಹಳಿ ತಪ್ಪಿದ ಸಂದರ್ಭ ಮಂಗಳೂರಿನ ‘ಬ್ರೇಕ್ ಡೌನ್ ಟೀಮ್’ ಕಾರ್ಯಾಚರಣೆ ನಡೆಸಿದೆ. ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಅಣಕು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಏರಿಯಾ ಆಫೀಸರ್ ಭೂಪತಿರಾಜ್, ಎಆರ್‌ಟಿ ಮೇಲ್ವಿಚಾರಕ ಕೆ.ಪಿ.ಸುಜೀತ್, ಸೀನಿಯರ್ ಸೆಕ್ಷನ್ ಇಂಜಿನಿಯರ್‌ಗಳಾದ ಸುಜಿತ್, ರಫೀಕ್, ಹರಿದಾಸ್, ಸುಜನ್ ಕಾರ್ಯಾಚರಣೆಯಲ್ಲಿ ಮಾರ್ಗದರ್ಶನ ನೀಡಿದರು.