ಪರಮಾಣು ಯುದ್ಧಕ್ಕೆ ಸಿದ್ಧರಾಗಿ
ಸಿಯೋಲ್, ಮಾ. 4: ಶತ್ರುಗಳಿಂದ ಹೆಚ್ಚೆಚ್ಚು ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಯಾವುದೇ ಸಮಯದಲ್ಲಾದರೂ ಪರಮಾಣು ಅಸ್ತ್ರಗಳನ್ನು ಬಳಸುವ ಪರಿಸ್ಥಿತಿಗೆ ಸಿದ್ಧವಾಗಿರುವಂತೆ ಉತ್ತರ ಕೊರಿಯದ ನಾಯಕ ಕಿಮ್ ಜೋಂಗ್ ಉನ್ ತನ್ನ ದೇಶಕ್ಕೆ ಆದೇಶ ನೀಡಿದ್ದಾರೆ ಹಾಗೂ ದೇಶದ ಸೇನೆಯನ್ನು ‘‘ಮುನ್ನೆಚ್ಚರಿಕಾ ದಾಳಿ’’ ಸ್ಥಿತಿಯಲ್ಲಿಡುವಂತೆ ಸೂಚಿಸಿದ್ದಾರೆ.
ಈ ವಿಷಯವನ್ನು ದೇಶದ ಸರಕಾರಿ ಮಾಧ್ಯಮ ಶುಕ್ರವಾರ ವರದಿ ಮಾಡಿದೆ.
ಅಧಿಕೃತ ಕೆಸಿಎನ್‌ಎ ವಾರ್ತಾ ಸಂಸ್ಥೆ ಈ ಸುದ್ದಿಯನ್ನು ಪ್ರಕಟಿಸಿದ್ದು, ಕೊರಿಯ ಪರ್ಯಾಯ ದ್ವೀಪದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ.
ಇತ್ತೀಚೆಗೆ ಪರಮಾಣು ಪರೀಕ್ಷೆ ನಡೆಸಿರುವುದಕ್ಕಾಗಿ ಹಾಗೂ ಕ್ಷಿಪಣಿಗಳನ್ನು ಉಡಾಯಿಸಿರುವುದಕ್ಕಾಗಿ ಉತ್ತರ ಕೊರಿಯದ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬುಧವಾರ ಕಠಿಣ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದ ಎರಡು ದಿನಗಳ ಬಳಿಕ ಉತ್ತರ ಕೊರಿಯ ತನ್ನ ಆಕ್ರಮಣಶೀಲತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಹೊಸದಾಗಿ ಅಭಿವೃದ್ಧಿಪಡಿಸಲಾದ ರಾಕೆಟ್ ಉಡಾವಕಗಳನ್ನೊಳಗೊಂಡ ಸೇನಾ ಅಭ್ಯಾಸಗಳ ಮೇಲ್ವಿಚಾರಣೆಯನ್ನು ವಹಿಸಿದ ಬಳಿಕ ಕಿಮ್ ಈ ಕರೆ ನೀಡಿದ್ದಾರೆ ಎಂದು ಕೆಸಿಎನ್‌ಎ ವರದಿ ಮಾಡಿದೆ.
ಸೇನಾಭ್ಯಾಸ ಯಾವಾಗ ನಡೆಯಿತೆಂಬ ಮಾಹಿತಿಯನ್ನು ಸುದ್ದಿಸಂಸ್ಥೆ ನೀಡಿಲ್ಲ. ಆದರೆ, ನೂತನ ರಾಕೆಟ್‌ಗಳ ವ್ಯಾಪ್ತಿಯೊಳಗೆ ದಕ್ಷಿಣ ಕೊರಿಯ ಬರುತ್ತದೆ. ಉತ್ತರ ಕೊರಿಯವು ಗುರುವಾರ ತನ್ನ ಕರಾವಳಿಯಿಂದ ಸಮುದ್ರಕ್ಕೆ ಸುಮಾರು 150 ಕಿಲೋಮೀಟರ್ ದೂರಕ್ಕೆ ಹಲವು ಸುತ್ತು ರಾಕೆಟ್‌ಗಳನ್ನು ಹಾರಿಸಿತು ಎಂದು ದಕ್ಷಿಣ ಕೊರಿಯದ ರಕ್ಷಣಾ ಸಚಿವಾಲಯ ಗುರುವಾರ ಹೇಳಿದೆ.