ಸಂವಹನದಲ್ಲಿ ಕಡೆಗಣಿಸಲ್ಪಟ್ಟ ನೈತಿಕತೆ: ಡಾ.ಅಗರ್ವಾಲ್ ರಾಷ್ಟ್ರೀಯ ಮಾಧ್ಯಮ ವಿಚಾರ ಸಂಕಿರಣ ಉದ್ಘಾಟನೆ
ಮಣಿಪಾಲ, ಮಾ.4: ಇಂದು ಸಾಮಾಜಿಕ ತಾಣಗಳು, ಇಂಟರ್ನೆಟ್, ಟಿವಿ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮಗಳು ಅಂಕೆ ಇಲ್ಲದಂತೆ ಬೆಳೆಯುತ್ತಿರುವ ಕಾಲದಲ್ಲಿ ಸಂವಹನ ನೈತಿಕತೆ ಹಾಗೂ ಮೀಡಿಯಾ ಕಾನೂನು ಕುರಿತು ಹೆಚ್ಚು ಜಾಗೃತರಾಗಬೇಕಾಗಿದೆ ಎಂದು ಹಿಮಗಿರಿ ವಿವಿಯ ಮಾಜಿ ಉಪಕುಲಪತಿ ಹಾಗೂ ಇಸ್ರೋ ಸಂಸ್ಥೆಯ ಸಲಹೆಗಾರ ಡಾ.ಬಿನೋದ್ ಸಿ. ಅಗರ್‌ವಾಲ್ ಅಭಿಪ್ರಾಯಪಟ್ಟಿದ್ದಾರೆ.
ಮಣಿಪಾಲ ವಿವಿಯ ಸ್ಕೂಲ್ ಆ್ ಕಮ್ಯೂನಿಕೇಶನ್ ವತಿಯಿಂದ ‘ಭಾರತದಲ್ಲಿ ಸಂವಹನ ಸಂಶೋಧನೆ- ದೃಷ್ಟಿಕೋನ, ಸವಾಲು, ನಿರೀಕ್ಷೆಗಳು’ ಎಂಬ ವಿಷಯದ ಕುರಿತು ಮಣಿಪಾಲದ ಾರ್ಚ್ಯೂನ್ ಇನ್ ವ್ಯಾಲಿವ್ಯೆ ಹೊಟೇಲ್ ಸಭಾಂಗಣದಲ್ಲಿ ಇಂದು ಆರಂಭಗೊಂಡ ಎರಡು ದಿನಗಳ ರಾಷ್ಟ್ರೀಯ ಮಾಧ್ಯಮ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂವಹನ ಕ್ಷೇತ್ರದಲ್ಲಿ ಇಂದು ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಆದರೆ ಸಂವಹನ ನೈತಿಕತೆ ಹಾಗೂ ಸಂವಹನ ಕಾನೂನು ಕುರಿತು ಯಾರೊಬ್ಬರೂ ವಿಶೇಷವಾದ ಗಮನವನ್ನೇ ಕೊಡುತ್ತಿಲ್ಲ. ಇಂದಿನ ಇಂಟರ್ನೆಟ್ ಯುಗದಲ್ಲಿ ಇದರ ಪರಿಣಾಮ ಗಂಭೀರವಾಗಿ ನಮಗೆ ಗೋಚರಿಸುತ್ತಿವೆ ಎಂದವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿವಿಯ ಉಪಕುಲಪತಿ ಡಾ.ಎಚ್.ವಿನೋದ್ ಭಟ್ ಮಾತನಾಡಿ, ಮಣಿಪಾಲ ವಿವಿಯ ಶೀಘ್ರವೇ ಮಣಿಪಾಲ ಮೀಡಿಯಾ ರಿಸರ್ಚ್ ಸೆಂಟರ್‌ನ್ನು ಪ್ರಾರಂಭಿಸಲಿದೆ ಎಂದು ಘೋಷಿಸಿದರು.
ಸಂಸ್ಥೆಯ ನಿರ್ದೇಶಕಿ ಡಾ.ನಂದಿನಿ ಲಕ್ಷ್ಮೀಕಾಂತ ಸ್ವಾಗತಿಸಿದರು. ಸಹಾಯಕ ನಿರ್ದೇಶಕಿ ಡಾ.ಪದ್ಮರಾಣಿ ವಂದಿಸಿದರು.